ಜಪಾನ್ನಲ್ಲಿ ಜ್ವಾಲಾಮುಖಿಯೊಂದು ತನ್ನ ಸೌಂದರ್ಯದಿಂದ ನೋಡುಗರ ಕಣ್ಮನ ಸೆಳೆಯುತ್ತಿದೆ. ಇಲ್ಲಿನ ಸಕುರಾಜಿಮ ಜ್ವಾಲಾಮುಖಿ ಇತ್ತೀಚೆಗೆ ಭುಗಿಲೆದಿದ್ದು, ಅದರ ಬಾಯಿಂದ ಚಿಮ್ಮಿದ ಲಾವಾರಸದೊಂದಿಗೆ ಮೈಲಿಯಷ್ಟು ಎತ್ತರದವರೆಗೂ ಹೊಗೆ ಎದ್ದಿದೆ.
ಈ ವೇಳೆ ಬೂದಿ ಮೇಲೇಳುತ್ತಿದ್ದಂತೆಯೇ ಮಿಂಚೊಂದು ಸಿಡಿದಿದೆ. ಪ್ರಕೃತಿಯ ಈ ರೋಮಾಂಚಕಾರಿ ನೃತ್ಯದ ಅದ್ಭುತ ಛಾಯಾಚಿತ್ರಗಳು ಸಖತ್ ಸದ್ದು ಮಾಡುತ್ತಿವೆ. ಈ ದ್ವೀಪದಲ್ಲಿರುವ ಗ್ರಾಮಸ್ಥರು ತಮ್ಮ ಮುಂದೆ ನಡೆಯುತ್ತಿರುವ ದೃಶ್ಯಸಿರಿಯನ್ನು ಕಣ್ತುಂಬಿಕೊಂಡಿದ್ದಾರೆ.
ಈ ಜ್ವಾಲಾಪಾತದಿಂದ ಮೇಲೇಳುತ್ತಿದ್ದ ಹೊಗೆಯು ಮೂರು ಮೈಲಿಯಷ್ಟು ಎತ್ತರಕ್ಕೆ ಭುಗಿಲೆದ್ದಿದ್ದು, ದೂರದಿಂದ ನೋಡಬಹುದಾಗಿದೆ. ಜ್ವಾಲಾಪಾತದ ವೇಳೆ ಹೀಗೆ ಮಿಂಚು ಸಿಡಿಯುವುದು ಹೇಗೆ ಎಂಬ ಕುರಿತಂತೆ ಇನ್ನೂ ಹೆಚ್ಚಾಗಿ ತಿಳಿದುಬಂದಿಲ್ಲ.
ಜಗತ್ತಿನ ಅತ್ಯಂತ ಸಕ್ರಿಯ ಜ್ವಾಲಾಮುಖಿ ಪ್ರದೇಶಗಳಲ್ಲಿ ಒಂದಾಗಿರುವ ಸಕುರಾಜಿಮಾದಲ್ಲಿ ಘಟಿಸುವ ಈ ವಿಸ್ಮಯವನ್ನು ಸೆರೆ ಹಿಡಿಯಲು ರಾಯ್ಟರ್ಸ್ ಸಂಸ್ಥೆಯ ಛಾಯಾಗ್ರಾಹಕರೊಬ್ಬರು ಕಾತರದಿಂದ ಇದ್ದಿದ್ದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.