ಮಲೆರ್ಕೊಟ್ಲಾ: ಧರ್ಮದ ಹೆಸರಲ್ಲಿ ದೇಶದ ಹಲವೆಡೆ ಗಲಾಟೆಗಳು ನಡೆಯುತ್ತಿರುತ್ತವೆ. ಆದರೆ, ಇಲ್ಲೊಂದು ಮಾದರಿ ಊರಿದೆ. ಮಂದಿರ ಹಾಗೂ ಮಸೀದಿ ನಡುವೆ ಒಂಭತ್ತು ಇಂಚಿನ ಒಂದು ಗೋಡೆ ಮಾತ್ರ ಇದೆ. ಆದರೆ, ಎಂದೂ ಗಲಾಟೆಯಾಗಿಲ್ಲ. ಹಿಂದು- ಮುಸ್ಲಿಂ ಇಲ್ಲಿ ಸದಾ ಸಹೋದರರಂತೆ ವಾಸಿಸುತ್ತಿದ್ದಾರೆ. ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ.
ಈ ಅಪರೂಪದ ಊರು ಇರುವುದು ಪಂಜಾಬ್ ರಾಜ್ಯದ ಮಲೆರ್ಕೊಟ್ಲಾದಲ್ಲಿ. ಇಲ್ಲಿನ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿರುವ ಶಿವಲಿಂಗಕ್ಕೆ ಅಕ್ವಾಸಾ ಮಸೀದಿಯ ಕಂಪೌಂಡ್ ನಲ್ಲಿರುವ ಬಿಲ್ವ ಪತ್ರೆ ತಂದು ಪೂಜಿಸಲಾಗುತ್ತದೆ. ಮಂದಿರದ ಘಂಟೆ ಹೊಡೆದ ನಂತರವೇ ಅಜಾನ್ ಫಟಿಸಲಾಗುತ್ತದೆ. ಮಸೀದಿ ಮೌಲಾನಾ ಅವರು ಮಂದಿರದ ಪೂಜಾರಿಯನ್ನು “ರಾಮ್ ರಾಮ್” ಎಂದು ಕರೆಯುತ್ತಾರೆ. ರಂಜಾನ್ ನಲ್ಲಿ ಹಿಂದು ಮನೆಗಳಿಂದ ಸಿಹಿ ಮುಸ್ಲಿಮರಿಗೆ ಹಂಚಿಕೆಯಾಗುತ್ತದೆ.
“2016 ರಲ್ಲಿ ಮಸೀದಿಗೆ ಬೆಂಕಿ ಬಿದ್ದಾಗ ಹಿಂದು ಹಾಗೂ ಸಿಖ್ ಕುಟುಂಬಗಳು ನಮ್ಮೊಂದಿಗೆ ನಿಂತಿದ್ದವು” ಎಂದು ಮೊಹಮದ್ ಶಬೀರ್ ನೆನಪಿಸಿಕೊಳ್ಳುತ್ತಾರೆ. “ರಾಜಕೀಯ ಇಲ್ಲಿ ಯಾವುದೇ ಪ್ರಭಾವ ಬೀರುವುದಿಲ್ಲ. ಒಡೆಯುವುದು ರಾಜಕೀಯ ನಾಯಕರ ಕೆಲಸ. ಅವರೇನೇ ಮಾಡಿದರೂ ನಾವು ನಿತ್ಯವೂ ಒಟ್ಟೊಟ್ಟಿಗೆ ವಾಸಿಸಬೇಕಾಗುತ್ತದೆ” ಎಂಬುದು ದೇವಸ್ಥಾನದ ಪೂಜಾರಿ ಚೇತನ ಶರ್ಮಾ(26), ಮೌಲ್ವಿ ಮೊಹಮದ್ ಹಶೀಮ್ (26) ಅವರೊಟ್ಟಿಗೆ ಕುಳಿತು ಅವರ ಮಾತನ್ನು ಬೆಂಬಲಿಸುತ್ತಾರೆ.