ಚಾರ್ಮಿನಾರ್ ನೋಡಬೇಕೆಂಬ ಆಸೆಯಿಂದ ಮನೆಯವರಿಗೆ ಮಾಹಿತಿ ನೀಡದೇ 6.50 ಲಕ್ಷ ರೂಪಾಯಿ ತೆಗೆದುಕೊಂಡು ನಾಪತ್ತೆಯಾಗಿದ್ದ 8 ಮಂದಿ ಅಪ್ರಾಪ್ತ ಮಕ್ಕಳನ್ನ ಆಟೋ ಚಾಲಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಸೂಕ್ತ ತನಿಖೆ ನಡೆಸಿದ ಹೈದರಾಬಾದ್ ಪೊಲೀಸರು ಮಕ್ಕಳು ಹಾಗೂ ನಗದನ್ನ ಪೋಷಕರಿಗೆ ಹಸ್ತಾಂತರಿಸಿದ್ದಾರೆ.
ಆಂಧ್ರಪ್ರದೇಶದ ಕಡಪಾ ಮೂಲದ ಮಕ್ಕಳು 2 ದಿನಗಳ ಹಿಂದೆ ತಮ್ಮ ಮನೆಯಿಂದ ಕಾಣೆಯಾಗಿದ್ದರು. ರೈಲಿನಲ್ಲಿ ಪ್ರಯಾಣ ಬೆಳೆಸಿದ್ದ 8 ಮಂದಿ ಅಪ್ರಾಪ್ತರು ನಾಂಪಲ್ಲಿ ರೈಲು ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಕಾಲ್ನಡಿಗೆ ಮೂಲಕ ಅಫ್ಜಲ್ಗುಂಜ್ ತಲುಪಿದ್ದರು.
ದಾರಿಹೋಕರ ಬಳಿ ಚಾರ್ಮಿನಾರ್ಗೆ ಹೋಗುವ ದಾರಿಯನ್ನ ಕೇಳುತ್ತಿದ್ದ ಮಕ್ಕಳನ್ನ ಆಟೋ ಚಾಲಕರು ಗಮನಿಸಿದ್ದರು. ಕೊನೆಗೆ ಆಟೋದಲ್ಲಿ ಚಾರ್ ಮಿನಾರ್ಗೆ ಹೋಗಲು ನಿರ್ಧರಿಸಿದ ಮಕ್ಕಳು ಆಟೋ ಚಾಲಕನಿಗೆ 2 ಸಾವಿರ ರೂಪಾಯಿ ನೋಟುಗಳನ್ನ ನೀಡಿದ್ದಾರೆ. ಇದರಿಂದ ಅನುಮಾನಗೊಂಡ ಆಟೋ ಚಾಲಕ ಮಕ್ಕಳನ್ನ ಚಾರ್ ಮಿನಾರ್ಗೆ ಕರೆದೊಯ್ಯುವ ಬದಲು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.