ಕ್ರಿಸ್ಮಸ್ ಹಬ್ಬದ ಸಂಭ್ರಮವನ್ನ ಹೆಚ್ಚಿಸಲು ಸಾಂತಾ ಕ್ಲಾಸ್ ಆಗಿ ವೇಷ ತೊಟ್ಟಿದ್ದ ಬೆಲ್ಜಿಯಂನ ವ್ಯಕ್ತಿಯೊಬ್ಬರು ವೃದ್ದಾಶ್ರಮದಲ್ಲಿ ಬರೋಬ್ಬರಿ 75 ಮಂದಿಗೆ ಕೊರೊನಾ ಸೋಂಕು ಹಬ್ಬಿಸುವ ಮೂಲಕ ಸೂಪರ್ ಸ್ಪ್ರೆಡರ್ ಹಣೆಪಟ್ಟಿಯನ್ನ ಪಡೆದಿದ್ದಾರೆ.
ವರದಿಗಳ ಪ್ರಕಾರ ಅನಾಮಿಕ ವ್ಯಕ್ತಿಯೊಬ್ಬ ಬೆಲ್ಜಿಯಂನಲ್ಲಿರುವ ಹೆಮೆಲ್ರಿಜಿಕ್ ವೃದ್ಧಾಶ್ರಮಕ್ಕೆ ಸಾಂತಾ ಕ್ಲಾಸ್ ವೇಷ ಧರಿಸಿ ಸಿಬ್ಬಂದಿ ಹಾಗೂ ವೃದ್ಧರಿಗೆ ಮನರಂಜನೆ ನೀಡಲು ಆಗಮಿಸಿದ್ದರು. ಆದರೆ ಆತನಿಗಾಗಲಿ ಇಲ್ಲವೇ ವೃದ್ಧಾಶ್ರಮದವರಿಗಾಗಲಿ ಸಾಂತಾ ವೇಷದಲ್ಲಿದ್ದ ವ್ಯಕ್ತಿ ಕೊರೊನಾ ಸೋಂಕಿತನಾಗಿದ್ದ ಎಂಬ ಮಾಹಿತಿ ಇರಲಿಲ್ಲ.
ವೃದ್ಧಾಶ್ರಮದಲ್ಲಿದ್ದ 150 ಮಂದಿ ಈತನ ಜೊತೆ ಸಂಪರ್ಕ ಹೊಂದಿದ್ದರು. ಇದೀಗ ವೃದ್ದಾಶ್ರಮದ 14 ಮಂದಿ ಸಿಬ್ಬಂದಿ ಹಾಗೂ 61 ಮಂದಿ ವೃದ್ಧರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಲ್ಲಿ ಒಬ್ಬರು ಉಸಿರಾಟಕ್ಕೆ ಕೃತಕ ಆಮ್ಲಜನಕದ ಮೊರೆ ಹೋಗಿದ್ದಾರೆ.