ಪ್ರೀತಿ -ಪ್ರೇಮ ಹೊಸದರಲ್ಲಿ ತುಂಬಾನೇ ಸವಿಯಾಗಿರುತ್ತೆ. ಸಮಯ ಕಳೆದಂತೆಲ್ಲ ಇದೇ ಸಂಬಂಧ ಕಿರಿಕಿರಿ ಎನಿಸಬಹುದು.ಇದೇ ಕಿರಿಕಿರಿ ಮುಂದುವರಿದು ಕೊನೆಗೆ ಬ್ರೇಕಪ್ ಕೂಡ ಆಗಬಹುದು. ಆದರೆ, ಇಲ್ಲೊಬ್ಬ ಮಹಿಳೆ ತನ್ನ ಸಂಗಾತಿಯ ಭವಿಷ್ಯದ ಪ್ಲಾನ್ ಏನಿದೆ ಅನ್ನೋದನ್ನ ತಿಳಿದುಕೊಳ್ಳೋಕೆ ಕೋರ್ಟ್ ಮೆಟ್ಟಿಲೇರಿದ್ದಾಳೆ.
ಪೂರ್ವ ಆಫ್ರಿಕಾದ ಝಾಂಬಿಯಾದ 26 ವರ್ಷದ ಮಹಿಳೆ ಗಟ್ರೂಡ್ ನಗೋಮಾ 28 ವರ್ಷದ ಹರ್ಬಟ್ ಸಲೈಕಿ ಜೊತೆ 8 ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದಳು. ಈ ಜೋಡಿಗೆ ಒಂದು ಮಗು ಕೂಡ ಜನಿಸಿತ್ತು. ಹರ್ಬಟ್ ನಗೋಮಾಳನ್ನ ಮದುವೆಯಾಗೋದಾಗಿ ಮಾತನ್ನ ನೀಡಿದ್ದನಂತೆ. ಆದರೆ, ಕಾಲ ಕ್ರಮೇಣ ಹರ್ಬಟ್ ಪ್ರಾಮಾಣಿಕತೆ ಮೇಳೆ ನಗೋಮಾಗೆ ಅನುಮಾನ ಉಂಟಾಗಿದೆ. ಆತ ಈ ಸಂಬಂಧವನ್ನ ಗಂಭೀರವಾಗಿ ಪರಿಗಣಿಸಿಲ್ಲ ಎಂದು ನಿರ್ಧರಿಸಿದ ಮಹಿಳೆ ಆತನ ಭವಿಷ್ಯದ ಕನಸಿನ ಬಗ್ಗೆ ತಿಳಿದುಕೊಳ್ಳಲು ಆತನನ್ನ ಕೋರ್ಟ್ಗೆ ಕರೆದೊಯ್ದಿದ್ದಾಳೆ .
ಇದಕ್ಕೆ ಕೋರ್ಟ್ನಲ್ಲಿ ಸಮರ್ಥನೆ ನೀಡಿದ ಹರ್ಬಟ್, ತಾನು ಮದುವೆಯಾಗಲು ಬಯಸಿದ್ದು ನಿಜ. ಆದರೆ ನಮ್ಮಿಬ್ಬರ ನಡುವೆ ಈಗ ಹೊಂದಾಣಿಕೆ ಕಡಿಮೆಯಾಗಿದೆ. ಅಲ್ಲದೇ, ಆಕೆಗೆ ನಾನು ವಧು ದಕ್ಷಿಣೆ ರೀತಿಯಲ್ಲಿ ಲೊಬೊಲಾ ಹಣ ಪಾವತಿಸಿದ್ದೇನೆ ಎಂದು ಹೇಳಿದ್ದಾನೆ.