ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ 20 ಲಕ್ಷ ರೂಪಾಯಿಗಳನ್ನ ಕಳೆದುಕೊಂಡಿದ್ದ 23 ವರ್ಷದ ಎಂಟೆಕ್ ವಿದ್ಯಾರ್ಥಿ ಕುಟುಂಬದ ಆಸ್ತಿಯನ್ನ ಮಾರಾಟ ಮಾಡಬೇಕು ಎಂದು ತಾಯಿ ಹಾಗೂ ಸಹೋದರಿಯನ್ನ ಕೊಂದ ಘಟನೆ ಹೈದರಾಬಾದ್ನ ಮೆಡ್ಚಲ್ನಲ್ಲಿ ನಡೆದಿದೆ.
ಪೊಲೀಸರು ಆರೋಪಿ ಪಿ. ಸೈನಾಥ್ ರೆಡ್ಡಿಯನ್ನ ಬಂಧಿಸಿದ್ದಾರೆ.
ಮೃತ ತಾಯಿಯನ್ನ ಪಿ. ಸುನಿತಾ(44) ಹಾಗೂ ಪುತ್ರಿಯನ್ನ ಪಿ. ಅನುಜಾ ರೆಡ್ಡಿ(22) ಎಂದು ಗುರುತಿಸಲಾಗಿದೆ. ಈತ ಕೀಟನಾಶಕವನ್ನ ನೀಡಿ ತಾಯಿ ಹಾಗೂ ಸಹೋದರಿಯನ್ನ ಕೊಂದಿದ್ದಾನೆ ಎನ್ನಲಾಗಿದೆ. ಮೂರು ವರ್ಷಗಳ ಹಿಂದೆ ಸೈನಾಥ್ ತಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ರು. ತಂದೆಯ 20 ಲಕ್ಷ ರೂಪಾಯಿ ಉಳಿತಾಯ ಹಾಗೂ ವಿಮಾ ಹಣವನ್ನ ಸುನೀತಾ ಖಾತೆಯಲ್ಲಿ ಜಮಾ ಮಾಡಿಡಲಾಗಿತ್ತು. ಆದರೆ ಐಶಾರಾಮಿ ಜೀವನ ಮಾಡುವ ಆಸೆಯಲ್ಲಿದ್ದ ಸೈನಾಥ್ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಇಳಿದಿದ್ದ.
ಸುನೀತಾ ಬ್ಯಾಂಕ್ ಖಾತೆಗೆ ಸೈನಾಥ್ ಮೊಬೈಲ್ ಸಂಖ್ಯೆಯನ್ನ ಲಿಂಕ್ ಮಾಡಲಾಗಿತ್ತು. ಕ್ರಿಕೆಟ್ ಬೆಟ್ಟಿಂಗ್ ದಂಧೆಗಾಗಿ ಸೈನಾಥ್ ತಾಯಿಯ ಖಾತೆಯಲ್ಲಿದ್ದ 20 ಲಕ್ಷ ರೂಪಾಯಿ ಹಾಗೂ ಸುನೀತಾಳ 15 ತೊಲೆ ಚಿನ್ನವನ್ನ ಮಾರಾಟ ಮಾಡಿದ್ದ. ಇದು ಮಾತ್ರವಲ್ಲದೇ ಸಾಲ ನೀಡುವ ಆನ್ಲೈನ್ ಅಪ್ಲಿಕೇಶನ್ ಹಾಗೂ ವೆಬ್ಸೈಟ್ಗಳಿಂದಲೂ ಲಕ್ಷಗಟ್ಟಲೇ ಸಾಲ ಮಾಡಿದ್ದ.
ಹೀಗಾಗಿ ಈ ಎಲ್ಲ ಸಾಲದ ಸುಳಿಯಿಂದ ಪಾರಾಗಲು ನಿರ್ಧರಿಸಿದ ಸೈನಾಥ್ ತಾಯಿ ಹಾಗೂ ಸಹೋದರಿಯನ್ನ ಕೊಂದು ಕುಟುಂಬದ ಆಸ್ತಿಯನ್ನ ಮಾರಾಟ ಮಾಡೋಕೆ ಮುಂದಾಗಿದ್ದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.