ಅಸ್ಸಾಂನ ಗುವಾಟಿಯಲ್ಲಿರುವ ಮಹಿಳಾ ಹಾಸ್ಟೆಲ್ ಒಂದಕ್ಕೆ ನುಗ್ಗಿದ ಚಿರತೆಯೊಂದು ಅಲ್ಲಿದ್ದ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಮೂರು ಗಂಟೆಗಳ ಸತತ ಯತ್ನದೊಂದಿಗೆ ಈ ದೊಡ್ಡ ಬೆಕ್ಕಿಗೆ ಅರವಳಿಕೆ ಕೊಡಲಾಗಿದೆ.
ಸೋಮವಾದ ಬೆಳಗ್ಗಿನ ಜಾವ ಚಿರತೆಯು ಹಾಸ್ಟೆಲ್‌ನ ಪ್ರಾಂಗಣ ಪ್ರವೇಶಿಸಿದ್ದಲ್ಲದೇ, ಹಾಸ್ಟೆಲ್ ಓನರ್‌ರ ಸೋಫಾ ಕೆಳಗೆ ಬಂದು ಕುಳಿತಿದೆ. ಮೈಲ್‌ಸ್ಟೋನ್ ಹೆಸರಿನ ಈ ಹಾಸ್ಟೆಲ್‌ಗೆ ಚಿರತೆ ಆಗಮಿಸಿದ ವೇಳೆ 15 ಹುಡುಗಿಯರು ಅಲ್ಲಿ ಇದ್ದರು.
ಚಿರತೆಯನ್ನು ಕಂಡ ಕೂಡಲೇ ಹಾಸ್ಟೆಲ್‌ನ ಮಾಲಕಿ ಮೌಸುಮಿ ಬೋರಾ ಅಲ್ಲಿದ್ದ ಎಲ್ಲ ಹುಡುಗಿಯರಿಗೂ ಈ ವಿಚಾರವನ್ನು ಗಮನಕ್ಕೆ ತಂದು ಅವರನ್ನೆಲ್ಲಾ ಅಲರ್ಟ್ ಮಾಡಿದ್ದಾರೆ. ಎಲ್ಲ ಹುಡುಗಿಯರನ್ನೂ ಅವರವರ ಕೋಣೆಗಳಿಗೆ ಲಾಕ್ ಮಾಡಿ, ಅರಣ್ಯ ಇಲಾಖೆ ಸಿಬ್ಬಂದಿಗೆ ಫೋನಾಯಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೂರು ಗಂಟೆಗಳ ನಿರಂತರ ಯತ್ನದಿಂದ, ಅದಕ್ಕೆ ಅರವಳಿಕೆ ಕೊಟ್ಟು, ಬೋನಿನಲ್ಲಿ ಮೃಗಾಲಯಕ್ಕೆ ಕೊಂಡೊಯ್ದಿದ್ದಾರೆ. ಚಿರತೆಗೆ ಏನಾದರೂ ಗಾಯಗಳು ಆಗಿವೆಯೇ ಎಂದು ಪರೀಕ್ಷಿಸಿ ಅದನ್ನು ಮರಳಿ ಕಾಡಿಗೆ ಬಿಡಲಾಗುವುದು.