
ಬೆಂಗಳೂರಿನಲ್ಲಿ ನಡೆದ ‘ಬೆಂಗಳೂರು ಟೆಕ್ ಸಮ್ಮಿಟ್ – 2020’ ಯಶಸ್ವಿಯಾಗಿದೆ. ಟೆಕ್ ಶೃಂಗದಲ್ಲಿ ರೈತರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.
ಹೊಲದಲ್ಲಿ ಯಾವ ಬೀಜ ಹಾಕಿದರೆ ಒಳ್ಳೆಯದು. ಉತ್ತಮ ಬೆಳೆ ಬೆಳೆಯಲು ಏನು ಮಾಡಬೇಕು ಎಂಬ ಮಾಹಿತಿಯನ್ನು ಡ್ರೋನ್ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ತಿಳಿದುಕೊಳ್ಳಬಹುದಾಗಿದೆ. ಟೋಕಿಯೊ ಯುನಿವರ್ಸಿಟಿ ಪ್ರಾಧ್ಯಾಪಕ ಸೆಶಿನಿನೋಮಿಯಾ ಅವರು, ಜಪಾನ್ – ಭಾರತ ಭವಿಷ್ಯದ ಸಮಾಜಕ್ಕಾಗಿ ಹೈಟೆಕ್ ಪರಿಹಾರಗಳ ಸಹ ಅಭಿವೃದ್ಧಿ ಸಂವಾದದಲ್ಲಿ ಇಂತಹುದೊಂದು ಮಾಹಿತಿ ನೀಡಿದ್ದಾರೆ.
ಸ್ವಯಂ ಚಾಲಿತ ಡ್ರೋನ್ ಮೂಲಕ ಹೊಲದ ನಿಖರವಾದ ಚಿತ್ರದ ದತ್ತಾಂಶ ಮಾಹಿತಿ ಸಂಗ್ರಹಿಸಲಾಗುತ್ತದೆ. ನಂತರದಲ್ಲಿ ಮಣ್ಣಿನ ತೇವಾಂಶ ಮತ್ತು ಸ್ಥಳದ ಉಷ್ಣಾಂಶ ದಾಖಲಿಸಿ ಬೆಳೆಯ ಸ್ಥಿತಿಗತಿಗಳ ದಾಖಲೀಕರಣ ನಡೆಸಲಾಗುವುದು. ಬೀಜದ ವಂಶವಾಹಿ ಮಾಹಿತಿ ಆಧರಿಸಿ ಎಷ್ಟು ಇಳುವರಿ ಬರಬಹುದು ಎಂಬ ಬಗ್ಗೆ ಲೆಕ್ಕಾಚಾರ ಹಾಕಲಾಗುತ್ತದೆ.
ಹೈದರಾಬಾದ್ ನಲ್ಲಿ ಈಗಾಗಲೇ ದತ್ತಾಂಶ ಸಂಗ್ರಹ ಮಾಡಿದ್ದು, ಅವುಗಳನ್ನು ಬಳಸಿಕೊಂಡು ರೈತರ ಹೊಲದ ಪರೀಕ್ಷೆ ಮಾಡಿ ಬೆಳೆ ಬೆಳೆಯುವ ಮೊದಲೇ ಯಾವ ಬೆಳೆ ಬೆಳೆಯಬೇಕು? ಎಷ್ಟು ನೀರು ಬೇಕು? ಇಳುವರಿ ಮೊದಲಾದ ಮಾಹಿತಿ, ಸಲಹೆಗಳನ್ನು ನೀಡಬಹುದಾಗಿದೆ ಎಂದು ಹೇಳಲಾಗಿದೆ.
ನಂತರದಲ್ಲಿ ಈ ಬಗ್ಗೆ ಮಾತನಾಡಿದ ಡಿಸಿಎಂ ಡಾ. ಸಿ.ಎಸ್. ಅಶ್ವತ್ಥನಾರಾಯಣ ಅವರು, ಕೃತಕ ಬುದ್ಧಿಮತ್ತೆ ಬಳಸಿ ಸಸ್ಯಗಳ ರೋಗ ಪತ್ತೆ ಹಚ್ಚುವುದು, ವಾತಾವರಣದಲ್ಲಿ ಏರುಪೇರಾಗುವುದು, ಬೆಳೆ ಹೇಗೆ ಬೆಳೆಯಬಹುದು ಎಂಬುದನ್ನು ತಿಳಿಯಬಹುದಾಗಿದೆ. ಇದೆಲ್ಲವೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಲ್ಲಿ ಇರುತ್ತದೆ. ವ್ಯವಸಾಯದಲ್ಲಿ ರೈತರಿಗೆ ಅತಿ ಹೆಚ್ಚು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.