ಮೊಸರು ಆರೋಗ್ಯಕ್ಕೆ ಒಳ್ಳೆಯದು. ಈ ವಿಷಯ ಎಲ್ಲರಿಗೂ ಗೊತ್ತು. ಆದ್ರೆ ಯಾವ ಸಮಯದಲ್ಲಿ ಮೊಸರು ಸೇವನೆ ಮಾಡಬೇಕೆನ್ನುವ ಗೊಂದಲ ಅನೇಕರಲ್ಲಿದೆ. ಯಾವ ಋತುವಿನಲ್ಲಿ ಹಾಗೂ ಯಾವ ಸಮಯದಲ್ಲಿ ಮೊಸರನ್ನು ಸೇವನೆ ಮಾಡಬಾರದು ಎಂಬುದನ್ನು ಸರಿಯಾಗಿ ತಿಳಿದಿದ್ದರೆ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು.
ರಾತ್ರಿ ಮೊಸರಿನ ಸೇವನೆ ಒಳ್ಳೆಯದಲ್ಲ. ಆಯುರ್ವೇದ ಕೂಡ ಇದನ್ನು ಹೇಳುತ್ತದೆ. ರಾತ್ರಿ ಊಟ ಮಾಡಿದ ನಂತ್ರ ನಾವು ಶ್ರಮದ ಕೆಲಸ ಮಾಡುವುದಿಲ್ಲ. ಬಹು ಬೇಗ ನಿದ್ದೆಗೆ ಜಾರುತ್ತೇವೆ. ಹಾಗಿರುವಾಗ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಕಫ, ಪಿತ್ತ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಸರು ಸೇವನೆ ಮಾಡುವುದು ಬಹಳ ಒಳ್ಳೆಯದು. ಆಲಸ್ಯ, ಎಸಿಡಿಟಿ, ಕೈ-ಕಾಲಿನ ನೋವು, ಕಣ್ಣಿನ ಸಮಸ್ಯೆಗಳಿಗೆ ಇದರಿಂದ ಮುಕ್ತಿ ಸಿಗುತ್ತದೆ. ಒಂದು ಸಮಯದಲ್ಲಿ 250 ಗ್ರಾಂ ಮೊಸರು ಸೇವನೆ ಮಾಡಬೇಕು. ಆಲಸ್ಯ, ಏರದ ತೂಕ, ಸರಿಯಾಗಿ ಜೀರ್ಣ ಕ್ರಿಯೆಯಾಗದಿರುವುದು, ಹಸಿವಾಗದ ಸಮಸ್ಯೆ ಎದುರಿಸುವವರು ಊಟದ ನಂತ್ರ ಮೊಸರಿಗೆ ಸಕ್ಕರೆ ಬೆರೆಸಿ ಸೇವನೆ ಮಾಡುವುದು ಒಳ್ಳೆಯದು.
ಹಾಲಿನ ಜೊತೆ ಮೊಸರು ಸೇವನೆ ಮಾಡಬೇಡಿ. ರಾತ್ರಿ ಯಾವುದೇ ಕಾರಣಕ್ಕೂ ಸಕ್ಕರೆ ಜೊತೆ ಮೊಸರನ್ನು ತಿನ್ನಬೇಡಿ. ಆಯುರ್ವೇದದ ಪ್ರಕಾರ ರಾತ್ರಿ ಮೊಸರಿನಿಂದ ದೂರ ಇರುವುದು ಒಳ್ಳೆಯದು. ಅನಿವಾರ್ಯವಾದಲ್ಲಿ ಮೊಸರಿಗೆ ಚಿಟಕಿ ಕಾಳು ಮೆಣಸಿನ ಪುಡಿ ಸೇರಿಸಿ ಸೇವನೆ ಮಾಡಿ.