ಶ್ರೀಲಂಕಾ ಕ್ರಿಕೆಟ್ ಟೀಂನ ಮಾಜಿ ನಾಯಕ ಮುತ್ತಯ್ಯ ಮುರುಳೀಧರನ್ ಜೀವನ ಆಧಾರಿತ ಸಿನಿಮಾ ‘800’ರಿಂದ ತಮಿಳು ನಟ ವಿಜಯ್ ಸೇತುಪತಿ ಹೊರಬಂದಿದ್ದಾರೆ. ಈ ಸಿನಿಮಾಗೆ ತಮಿಳಿಗರಿಂದ ಭಾರೀ ವಿರೋಧ ಕೇಳಿ ಬಂದ ಹಿನ್ನೆಲೆ ವಿಜಯ್ ಸೇತುಪತಿ ಈ ನಿರ್ಧಾರಕ್ಕೆ ಬಂದಿದ್ದಾರೆ.
ಆದರೆ ಸಿನಿಮಾದಿಂದ ಹೊರಬಂದರೂ ಕೂಡ ವಿಜಯ್ ಮೇಲಿನ ಕೋಪ ಕಡಿಮೆಯಾದಂತೆ ಕಾಣ್ತಿಲ್ಲ. ವಿಜಯ್ ಸೇತುಪತಿ ಮಾಡಿದ್ದ ಟ್ವೀಟ್ಗೆ ಟ್ರೋಲ್ ಮೂಲಕ ರಿಪ್ಲೈ ಕೊಡಲಾಗಿದ್ದು ಇದರಲ್ಲಿ ಸೇತುಪತಿ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪುತ್ರಿಗೆ ಅಪ್ರಾಪ್ತನೊಬ್ಬ ಅತ್ಯಾಚಾರದ ಬೆದರಿಕೆ ಹಾಕಿ ಜೈಲುಪಾಲಾಗಿದ್ದ. ಈ ಬೆನ್ನಲ್ಲೇ ಇದೀಗ ವಿಜಯ್ ಸೇತುಪತಿ ಪುತ್ರಿಗೂ ಅತ್ಯಾಚಾರದ ಬೆದರಿಕೆ ಹಾಕಲಾಗಿದೆ.
ಈ ಅಶ್ಲೀಲ ಟ್ರೋಲ್ ಟ್ವಿಟರ್ನಲ್ಲಿ ವೈರಲ್ ಆಗ್ತಿದ್ದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಈ ಖಾತೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವಿಟರ್ ಸಂಸ್ಥೆಗೆ ಆಗ್ರಹಿಸಿದ್ದಾರೆ. ಗಾಯಕಿ ಚಿನ್ಮಯಿ ಶ್ರೀಪದಾ ಚೆನ್ನೈ ಪೊಲೀಸರು ಹಾಗೂ ಆಡ್ಯಾರ್ ಡೆ. ಕಮಿಷನರ್ಗೆ ಟ್ಯಾಗ್ ಮಾಡಿ ಟ್ರೋಲ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ ಅಂತಾ ಕೋರಿದ್ದಾರೆ.
ಮುತ್ತಯ್ಯ ಮುರಳೀಧರನ್ 2009ರಲ್ಲಿ ತಮಿಳಿಗರ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕೆ ಅವರ ಜೀವನ ಆಧಾರಿತ ತಮಿಳು ಸಿನಿಮಾ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು.