ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ಹಾಗೂ ಸಂಜನಾ ಜಾಮೀನು ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಈ ನಡುವೆ ನಟಿಯರಿಬ್ಬರೂ ಜೈಲಿನಲ್ಲಿ ತಮಗೆ ಬೇಕಾದ ವಸ್ತುಗಳನ್ನು ಕೊರಿಯರ್ ಮೂಲಕ ತರಿಸಿಕೊಳ್ಳುತ್ತಿದ್ದು, ಇದೀಗ ಅಧಿಕಾರಿಗಳು ಕಡಿವಾಣ ಹಾಕಿದ್ದಾರೆ.
ನಟಿ ರಾಗಿಣಿ ದ್ವಿವೇದಿ, ತನಗೆ ಬೆನ್ನು ನೋವು ಎಂದು ನೆಪ ಹೇಳಿ ಮನೆಯಿಂದ ಜೈಲು ಕೊಠಡಿಗೆ ಕೊರಿಯರ್ ಮೂಲಕ ಕೆಲ ವಸ್ತುಗಳನ್ನು ತರಿಸಿಕೊಳ್ಳಲು ಹೋಗಿ ಸಿಕ್ಕಿಬಿದ್ದಿದ್ದಾರೆ.
ರಾಗಿಣಿ ಹೆಸರಲ್ಲಿ ಬಂದ ಕೊರಿಯರ್ ನ್ನು ಸ್ಕ್ಯಾನರ್ ಮೂಲಕ ಚೆಕ್ ಮಾಡಿದ ಸಿಬ್ಬಂದಿಗೆ ಅದರಲ್ಲಿ ಕುಡಿಯುವ ನೀರಿನ ವಾಟರ್ ಹೀಟರ್ ಇರುವುದು ಗೊತ್ತಾಗಿದೆ. ಬಟ್ಟೆಯಂತಹ ವಸ್ತುಗಳನ್ನು ಮಾತ್ರ ನೀಡುವ ಅವಕಾಶವಿರುವ ಹಿನ್ನೆಲೆಯಲ್ಲಿ ರಾಗಿಣಿಗೆ ಬಂದ ಕೊರಿಯರ್ ನ್ನು ಸಿಬ್ಬಂದಿಗಳು ವಾಪಸ್ ಕಳುಹಿಸಿದ್ದಾರಂತೆ. ಅಲ್ಲದೇ ಬಟ್ಟೆ ಹಾಗೂ ತಿಂಡಿ ಹೊರತುಪಡಿಸಿ ಬೇರೆ ಏನನ್ನೂ ತರಿಸಿಕೊಳ್ಳುವಂತಿಲ್ಲ ಎಂದು ಖಡಕ್ ಆಗಿ ಸೂಚಿಸಿದ್ದಾರೆ ಎನ್ನಲಾಗಿದೆ.