ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಡೋಪಿಂಗ್ ಟೆಸ್ಟ್ ನಲ್ಲಿ ಎಡವಟ್ಟಾಗಿದೆ. ನಟಿಯರಾದ ರಾಗಿಣಿ, ಸಂಜನಾ ಅವರ ಕೂದಲು ಸ್ಯಾಂಪಲ್ ನ್ನು ಹೈದರಾಬಾದ್ ನ ಲ್ಯಾಬ್ ವಾಪಸ್ ಕಳುಹಿಸಿದೆ.
ಈ ಬಗ್ಗೆ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಹೇಳಿಕೆ ನೀಡಿದ್ದು, ಡೋಪಿಂಗ್ ಟೆಸ್ಟ್ ಗಾಗಿ ನಟಿ ರಾಗಿಣಿ ಹಾಗೂ ಸಂಜನಾ ಅವರ ಕೂದಲ ಸ್ಯಾಂಪಲ್ ನ್ನು ಹೈದರಾಬಾದ್ ಲ್ಯಾಬ್ ಗೆ ಕಳುಹಿಸಲಾಗಿತ್ತು. ಆದರೆ ಟೆಕ್ನಿಕಲ್ ಸಮಸ್ಯೆಯಿಂದಾಗಿ ಲ್ಯಾಬ್ ಕೂದಲು ಸ್ಯಾಂಪಲ್ ನ್ನು ವಾಪಸ್ ಕಳುಹಿಸಿದೆ. ಕೂದಲನ್ನು ಸಿಲ್ವರ್ ಫಾಯಿಲ್ ನಲ್ಲಿ ಕಳುಹಿಸಬೇಕಿತ್ತು. ಆದರೆ ಪ್ಲಾಸ್ಟಿಕ್ ಕವರ್ ನಲ್ಲಿ ಕಳುಹಿಸಲಾಗಿತು. ಹೀಗಾಗಿ ತಾಂತ್ರಿಕ ಸಮಸ್ಯೆಯಾಗಿದೆ. ಇದೀಗ ಸರಿಪಡಿಸಿ ಮತ್ತೊಮ್ಮೆ ಸ್ಯಾಂಪಲ್ ಕಳುಹಿಸಿದ್ದೇವೆ ಎಂದು ತಿಳಿಸಿದರು.
ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ, ಸಂಜನಾ, ರಾಹುಲ್, ರವಿಶಂಕರ್ ಸೇರಿದಂತೆ ಆರು ಆರೋಪಿಗಳ ಕೂದಲು, ಮೂತ್ರ, ರಕ್ತದ ಮಾದರಿಯನ್ನು ಪಡೆದು ಡೋಪಿಂಗ್ ಟೆಸ್ಟ್ ಗಾಗಿ ಹೈದರಾಬಾದ್ ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.