ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಮಾಜಿ ಗೃಹ ಸಚಿವರ ಪುತ್ರನ ಹೆಸರು ಕೇಳಿಬಂದಿದ್ದು, ಈ ಪ್ರಕರಣ ಸಂಬಂಧ ಬೆಂಗಳೂರು ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಸಮನ್ಸ್ ನೀಡಲು ಸಿದ್ಧತೆ ನಡೆಸಿದ್ದಾರೆ.
ಬೆಂಗಳೂರು ಡ್ರಗ್ಸ್ ಪ್ರಕರಣದಲ್ಲಿ ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ ಹೆಸರು ಕೇಳಿಬಂದಿದೆ. ಎನ್.ಸಿ.ಬಿ.ಯಿಂದ ಬಂಧನಕ್ಕೀಡಾಗಿರುವ ಡ್ರಗ್ಸ್ ಪೆಡ್ಲರ್ ಅನೂಪ್ ಎಂಬಾತ ಬಿನೀಶ್ ಕೊಡಿಯೇರಿ ಜೊತೆ ತನಗೆ ಸಂಪರ್ಕವಿರುವುದಾಗಿ ಹಾಗೂ ಆತನಿಂದ ಹಣ ಪಡೆದುಕೊಂಡಿದ್ದಾಗಿ ಬಾಯ್ಬಿಟ್ಟಿದ್ದಾನೆ.
ಡ್ರಗ್ಸ್ ದಂಧೆಕೋರನಾಗಿರುವ ಅನೂಪ್ ಗೆ ಬಿನೀಶ್, ಬೆಂಗಳೂರಿನಲ್ಲಿ ರೆಸ್ಟೋರೆಂಟ್ ತೆರೆಯಲು 50 ಲಕ್ಷ ರೂ. ಹಣ ನೀಡಿದ್ದರು. ಈ ಬಗ್ಗೆ ಅನೂಪ್ ಎನ್.ಸಿ.ಬಿ. ವಿಚಾರಣೆ ವೇಳೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಬೆಂಗಳೂರು ಇಡಿ ಅಧಿಕಾರಿಗಳು ಬಿನೀಶ್ ಕೊಡಿಯೇರಿಗೆ ಸಮನ್ಸ್ ನೀಡಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕೇರಳದ ಬಹುಕೋಟಿ ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಕೂಡ ಬಿನೀಶ್ ಹೆಸರು ಕೇಳಿಬಂದಿತ್ತು. ಇದೀಗ ಮಾಜಿ ಸಚಿವರೂ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.