ಅತ್ತ ಸ್ಯಾಂಡಲ್‌ವುಡ್‌ನಲ್ಲಿ ಗಾಂಜಾ, ಡ್ರಗ್ ನಶೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಇತ್ತ ಪೊಲೀಸರು ರಾಜ್ಯಾದ್ಯಂತ ಅಲರ್ಟ್ ಆಗಿದ್ದಾರೆ. ಗಾಂಜಾ ಮಾರಾಟ ಮಾಡುವವರು ಹಾಗು ಜಮೀನಿನಲ್ಲಿ ಯಾರಿಗೂ ತಿಳಿಯದಂತೆ ಗಾಂಜಾ ಬೆಳೆಯುವವರ ವಿರುದ್ಧ ಸಮರ ಸಾರಿದ್ದಾರೆ. ಮೊಳಕಾಲ್ಮೂರು ತಾಲೂಕು ರಾಂಪುರ ಸಮೀಪದ 4.20 ಎಕರೆ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ.
ಹೌದು, ರಾಂಪುರ ಸಮೀಪದಲ್ಲಿ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಅಂತಾಪುರ ಕೊರಚರಹಟ್ಟಿ ನಿವಾಸಿಯಾದ ರುದ್ರೇಶ್ ಎಂಬಾತ ಕೂಡ್ಲಿಗಿ ತಾಲೂಕಿನ ಮಹದೇವಪುರ ನಿವಾಸಿ ಸಮಂತಗೌಡ ಎಂಬ ಮಧ್ಯವರ್ತಿಯ ಮೂಲಕ ಜಮೀನು ಗುತ್ತಿಗೆ ಪಡೆದಿದ್ದ. ನೀರಾವರಿ ಜಮೀನನ್ನೇ ಗುತ್ತಿಗೆ ಪಡೆದ ಈತ 4.20 ಎಕರೆಯಲ್ಲಿ ಗಾಂಜಾ ಗಿಡ ಬೆಳೆಸಿದ್ದ. ಖಚಿತ ಮಾಹಿತಿ ಮೇಲೆ ರಾಂಪುರ ಠಾಣೆ ಪಿಎಸ್‌ಐ ಗುಡ್ಡಪ್ಪ ನೇತೃತ್ವದ ತಂಡ ಸೆಪ್ಟೆಂಬರ್ 4 ರಂದು ಮುಂಜಾನೆ ದಾಳಿ ಮಾಡಿದಾಗ ನಿಜಕ್ಕೂ ಶಾಕ್ ಆಗಿತ್ತು. ಸುಮಾರು ನಾಲ್ಕು ಕೋಟಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದರು.
ಇನ್ನು ಪೊಲೀಸರ ದಾಳಿ ತಿಳಿದ ಆರೋಪಿಗಳು ಪರಾರಿಯಾಗಿದ್ದರು. ಆದರೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಅವರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಜೊತೆಗೆ ಜಮೀನು ಗುತ್ತಿಗೆಗೆ ನೀಡಿದ್ದವರ ವಿರುದ್ದವೂ ಕೇಸು ದಾಖಲಾಗಿದೆ. ಇನ್ನು ಐವರು ಆರೋಪಿಗಳ ಮೇಲೆ ಎನ್‌ಡಿಪಿಎಸ್ ಆಕ್ಟ್ ಕಲಂ 8 ಹಾಗೂ 20(ಎ) (ಬಿ) ಅಡಿ ಪ್ರಕರಣ ದಾಖಲಿಸಿದ್ದಾರೆ.