ಅಮೆರಿಕಾದ 20 ವರ್ಷದ ಹುಡುಗಿಯೊಬ್ಬಳು ಮೃತಪಟ್ಟಿದ್ದಾಳೆ ಎಂದು ಪ್ಯಾರಾಮೆಡಿಕ್ಸ್ ಘೋಷಣೆ ಮಾಡಿದ ಬಳಿಕವೂ ಆಕೆ ಜೀವಂತವಿರುವುದು ತಿಳಿದುಬಂದಿದೆ.
ಟಿಮೇಶಾ ಬ್ಯೂಚಾಂಪ್ ಹೆಸರಿನ ಈ ಹುಡುಗಿ ಹೃದಯ ಸ್ಥಂಭನದಿಂದ ಈಕೆ ಮೃತಪಟ್ಟಿದ್ದಾಳೆ ಎಂದು ಮಿಷಿಗನ್‌ನ ಚಿತಾಗಾರವೊಂದರಲ್ಲಿ ಅಂತ್ಯ ಸಂಸ್ಕಾರ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.
ಪ್ಯಾರಾಮೆಡಿಕ್ ಸಿಬ್ಬಂದಿ ಅರ್ಧ ಗಂಟೆ ಕಾಲ CPR ಸೇರಿದಂತೆ ಇನ್ನಿತರ ಪ್ರಯತ್ನಗಳನ್ನು ಮಾಡಿ ಆಕೆಯನ್ನು ರಕ್ಷಿಸಲು ನೋಡಿದ್ದಾರೆ. ಆದರೆ ಆಕೆ ಇವ್ಯಾವುದಕ್ಕೂ ಸ್ಪಂದಿಸದೇ ಇದ್ದ ಕಾರಣ, ಹುಡುಗಿ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಗಿದೆ. ಇದಾದ ಬಳಿಕ ಆಸ್ಪತ್ರೆಯ ಸಕಲ ಪ್ರಕ್ರಿಯೆಗಳನ್ನು ಮಾಡಿ ಮುಗಿಸಿದ ಬಳಿಕ ಆಕೆಯ ದೇಹವನ್ನು ಅಂತ್ಯ ಸಂಸ್ಕಾರ ಮಾಡಿಕೊಳ್ಳಲು ಆಕೆಯ ಕುಟುಂಬಸ್ಥರಿಗೆ ಕೊಡಲಾಗಿತ್ತು.
ಆದರೆ ಟಿಮೇಶಾ ದೇಹವನ್ನು ಇನ್ನೇನು ಅಂತ್ಯ ಸಂಸ್ಕಾರ ಮಾಡಬೇಕು ಎನ್ನುವಷ್ಟರಲ್ಲಿ ಆಕೆಯ ಕಣ್ಣುಗಳು ಚಲಿಸುತ್ತಿರುವುದನ್ನು ಚಿತಾಗಾರದ ಸಿಬ್ಬಂದಿ ಗಮನಿಸಿದ್ದಾರೆ. ಕೂಡಲೇ ಡೆಟ್ರಾಯ್ಸ್ ಅಗ್ನಿಶಾಮಕ ದಳದ ಪ್ಯಾರಾಮೆಡಿಕ್ ಸಿಬ್ಬಂದಿಯನ್ನು ಕರೆಯಿಸಿದ ಚಿತಾಗಾರ ಸಿಬ್ಬಂದಿ, ಹುಡುಗಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಹುಡುಗಿ ಈಗ ಸಾವು – ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.