ಮಾನ್ಸೂನ್ ಮಾಸದ ಭಾರೀ ಪ್ರವಾಹದ ಕಾರಣದಿಂದಾಗಿ ಗರ್ಭಿಣಿ ಮಹಿಳೆಯೊಬ್ಬರನ್ನು ಅವರ ಕುಟುಂಬದ ಸದಸ್ಯರು ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿ ಬಂದಿದೆ. ನಕ್ಸಲ್ ಪೀಡಿತ ಭದ್ರಾದ್ರಿ ಕೋತಗುಡೆಂ ಜಿಲ್ಲೆಯಲ್ಲಿ ಈ ಘಟನೆ ಜರುಗಿದೆ.
ಲೋನಾವತ್ ಮೆಹ್ತಾ ಹೆಸರಿನ ಈ ಗರ್ಭಿಣಿ ಮಹಿಳೆಯ ಪರಿಸ್ಥಿತಿ ಗಂಭೀರವಾದ ಕಾರಣ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ತುರ್ತು ಪರಿಸ್ಥಿತಿ ಉದ್ಭವಿಸಿತ್ತು. ಈ ಸಮಯದಲ್ಲಿ, ಮಳೆ ಕಾರಣ ರಸ್ತೆ ಹದಗೆಟ್ಟು 108 ಆಂಬುಲೆನ್ಸ್ ಅಲ್ಲಿಗೆ ಬರುವುದು ಸಾಧ್ಯವಾಗದೇ ಇದ್ದ ವೇಳೆ, ಮಹಿಳೆಯ ಸಂಬಂಧಿಕರು ಅಲ್ಲಿಗೆ ಬಂದು ಆಕೆಯನ್ನು ಆಸ್ಪತ್ರೆಗೆ ಹೊತ್ತೊಯ್ದಿದ್ದಾರೆ.
ಈ ಪ್ರದೇಶಕ್ಕೆ ಸೂಕ್ತ ರಸ್ತೆ ಹಾಗೂ ಸೇತುವೆಯೊಂದನ್ನು ನಿರ್ಮಾಣ ಮಾಡಲು ನಾಲ್ಕು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದರೂ ಸಹ ನಕ್ಸಲೈಟ್ ದಾಳಿಯ ಭೀತಿಯ ನಡುವೆ ಈ ಕೆಲಸ ಇನ್ನೂ ಬಾಕಿ ಇದೆ. ಈ ಕಾರಣದಿಂದಾಗಿ ಪ್ರದೇಶದಲ್ಲಿರುವ ಜನರಿಗೆ ಈ ರೀತಿಯ ಸವಾಲುಗಳು ಸಾಮಾನ್ಯ ಎಂಬಂತಾಗಿಬಿಟ್ಟಿವೆ.