ನಾವು ಮನುಷ್ಯರು ಬೆನ್ನು ತುರಿಸಿದರೆ ಹೇಗೆ ಕೆರೆದುಕೊಳ್ಳುತ್ತೇವೆ ? ಒಂದೋ ಬೇರೊಬ್ಬರ ಸಹಾಯ ಪಡೆಯುತ್ತೇವೆ, ಇಲ್ಲವೇ ಪ್ರಾಣಿಗಳಂತೆ ಗೋಡೆಗೆ ಉಜ್ಜುತ್ತೇವೆ. ಅದೂ ಇಲ್ಲದಿದ್ದರೆ, ಉದ್ದಗಿರುವ ಕೋಲು, ಕಡ್ಡಿಯಿಂದ ಕೆರೆದುಕೊಳ್ಳುತ್ತೇವೆ.
ಹಲ್ಲಿನ ಸಂಧಿ ಆಹಾರ ಸಿಕ್ಕಿ ಹಾಕಿಕೊಂಡರೆ, ಶುಚಿಗೊಳಿಸಿಕೊಳ್ಳಲು ಟೂಥ್ ಪಿಕ್ ಬಳಸುತ್ತೇವೆ.
ಈ ಎಲ್ಲ ಬುದ್ಧಿಗಳು ನಮಗೆ ಮಾತ್ರವಲ್ಲ, ಅದ್ಯಾರು ಹೇಳಿಕೊಟ್ಟರೋ, ಯಾರನ್ನು ನೋಡಿ ಅದೆಲ್ಲಿ ಕಲಿತವೋ ಗೊತ್ತಿಲ್ಲ. ಪ್ರಾಣಿಗಳಿಗೂ ಈ ಬುದ್ಧಿ ಬಂದುಬಿಟ್ಟಿದೆ.
ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಮೃಗಾಲಯದಲ್ಲಿನ ಆನೆಗಳು ಇದೇ ಕೆಲಸ ಮಾಡಿವೆ.
ಮೃಗಾಲಯದ ಅಧಿಕಾರಿಗಳು ಹೇಳುವಂತೆ, ಸಾಧಾರಣವಾಗಿ ಪ್ರಾಣಿಗಳ ವರ್ತನೆಯನ್ನು ಆಗಾಗ್ಗೆ ಗಮನಿಸುತ್ತಾ ಇರುತ್ತೇವೆ. ಅದೇ ರೀತಿ ಸುಂದರ್ ಮತ್ತು ಮೇನಕಾ ಆನೆಗಳು ಮರದ ರೆಂಬೆ ಬಳಸಿ ಅದೇನನ್ನೋ ಮಾಡುತ್ತಿರುವಂತಿತ್ತು. ಸ್ವಲ್ಪ ಹೊತ್ತು ಗಮನಿಸಿದ ಬಳಿಕವೇ ಗೊತ್ತಾದದ್ದು ಅವು ಏನು ಮಾಡುತ್ತಿವೆ ಎಂದು. ಆದರೆ, ಈ ರೀತಿಯ ವರ್ತನೆ ಗಮನಿಸಿದ್ದು ಇದೇ ಮೊದಲು ಎನ್ನುತ್ತಾರೆ.
20 ವರ್ಷದ ಮೇನಕಾ ಆನೆಯನ್ನು 2014 ರಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದ ದೇವಸ್ಥಾನವೊಂದರಿಂದ ರಕ್ಷಿಸಿ ಕರೆತರಲಾಯಿತು. ಇದು ಮರದ ರೆಂಬೆಯೊಂದನ್ನು ಬಳಸಿ ತನ್ನ ಎಡಗಿವಿಯನ್ನು ತುರಿಸಿಕೊಳ್ಳುತ್ತಿತ್ತು. ಅಲ್ಲದೆ, ಬಾಯಿಗೂ ದಂತಕ್ಕೂ ನಡುವೆ ಸಿಲುಕಿದ್ದ ಅಳಿದುಳಿದ ಆಹಾರ ತೆಗೆಯಲು ಅದೇ ಕಡ್ಡಿಯಿಂದ ಕಷ್ಟಪಡುತ್ತಿದ್ದ ದೃಶ್ಯವನ್ನು ಸೆರೆ ಹಿಡಿಯಲಾಗಿದೆ.
ಅದೇ ರೀತಿ ಬೆಂಗಳೂರಿನ ದೇಗುಲವೊಂದರಿಂದ ರಕ್ಷಿಸಿ ತರಲಾಗಿರುವ 30 ವರ್ಷದ ಮೇನಕಾ ವರ್ತನೆ ಕೂಡ ಕಣ್ಣಿಗೆ ಬಿತ್ತು. ಆನೆಗಳ ಬುದ್ಧಿ ಸಹ ಚುರುಕು ಎಂದು ಮೃಗಾಲಯದ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ಹೇಳಿದ್ದಾರೆ.