ಊಟದ ಜತೆ ಏನಾದರೂ ಸೈಡ್ ಡಿಶ್ ಇದ್ದರೆ ಹೊಟ್ಟೆಗೆ ಊಟ ಇಳಿದಿದ್ದೇ ಗೊತ್ತಾಗುವುದಿಲ್ಲ. ಅದರಲ್ಲೂ ಪನ್ನೀರ್ ಇದ್ದರೆ ಕೇಳಬೇಕಾ…? ಇಲ್ಲಿ ಸುಲಭವಾಗಿ ಪನ್ನೀರ್ ಟಿಕ್ಕಾ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಾಗ್ರಿಗಳು:
ಪನ್ನೀರ್ – 200 ಗ್ರಾಂ, ಈರುಳ್ಳಿ – 2, ಕ್ಯಾಪ್ಸಿಕಂ – 1, 2 ಟೇಬಲ್ ಸ್ಪೂನ್ – ಲಿಂಬೆಹಣ್ಣಿನ ರಸ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಸ್ಪೂನ್, ಮೊಸರು – 1/2 ಕಪ್, ಕಡಲೆಹಿಟ್ಟು – 2 ಟೇಬಲ್ ಸ್ಪೂನ್, ಅರಿಶಿನ ಪುಡಿ – 1/4 ಟೀ ಸ್ಪೂನ್, ಗರಂ ಮಸಾಲ – 1/2 ಟೀ ಸ್ಪೂನ್, ಖಾರದ ಪುಡಿ – 1 ಚಮಚ, ಕಸೂರಿ ಮೇಥಿ – 1/2 ಟೀ ಸ್ಪೂನ್, ಚಿಟಿಕೆ – ಕೆಂಪು ಫುಡ್ ಕಲರ್, ಎಣ್ಣೆ – ಸ್ವಲ್ಪ, ರುಚಿಗೆ ತಕ್ಕಷ್ಟು – ಉಪ್ಪು, ಟಿಕ್ಕಾ ಮಾಡುವುದಕ್ಕೆ ಸ್ಟಿಕ್ – 8.
ಮಾಡುವ ವಿಧಾನ:
ಒಂದು ಬೌಲ್ ಗೆ ಮೊಸರು, ಶುಂಠಿ – ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಖಾರದ ಪುಡಿ, ಕಡಲೆಹಿಟ್ಟು, ಉಪ್ಪು, ಕಸೂರಿ ಮೇಥಿ, ಲಿಂಬೆಹಣ್ಣಿನ ರಸ, ಗರಂ ಮಸಾಲ, ಫುಡ್ ಕಲರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಪನ್ನೀರ್ ಅನ್ನು ಚೌಕಾಕಾರದಲ್ಲಿ ಕತ್ತರಿಸಿ ಹಾಕಿ ನಂತರ ಕ್ಯಾಪ್ಸಿಕಂ ಹಾಗೂ ಈರುಳ್ಳಿಯನ್ನು ಕ್ಯೂಬ್ಸ್ ರೀತಿ ಕತ್ತರಿಸಿ ಹಾಕಿ, 1 ಚಮಚ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ 1 ಗಂಟೆಗಳ ಕಾಲ ಹಾಗೆಯೇ ಬಿಡಿ.
ನಂತರ ಗ್ಯಾಸ್ ಮೇಲೆ ಗ್ರಿಲ್ ಪ್ಯಾನ್ ಇಡಿ. ಈ ಪನ್ನೀರ್ ಈರುಳ್ಳಿ, ಕ್ಯಾಪ್ಸಿಕಂ ಅನ್ನು ಒಂದೊಂದಾಗಿ ಸ್ಟಿಕ್ ಗೆ ಚುಚ್ಚಿಕೊಂಡು ಇದನ್ನು ಬಿಸಿಯಾದ ಗ್ರಿಲ್ ಪ್ಯಾನ್ ಮೇಲೆ ಇಟ್ಟು ಬೇಯಿಸಿಕೊಳ್ಳಿ. ಆಗಾಗ ಇದನ್ನು ತಿರುವಿ ಹಾಕಿ. ಸಣ್ಣ ಉರಿಯಲ್ಲಿಯೇ ಬೇಯಲಿ. ನಂತರ ಪುದೀನಾ ಚಟ್ನಿಯೊಂದಿಗೆ ಸರ್ವ್ ಮಾಡಿ.