![](https://kannadadunia.com/wp-content/uploads/2020/07/maxresdefault-19.jpg)
ಅನ್ನ ಸಾಂಬಾರಿನ ಜತೆ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ ಅಂದುಕೊಳ್ಳುತ್ತಿದ್ದೀರಾ…? ಬೇಗನೆ ಆಗುವಂತ ಜತೆಗೆ ತಿನ್ನುವುದಕ್ಕೆ ರುಚಿಕರವಾಗಿರುವ ಮಸಾಲ ಎಗ್ ಬುರ್ಜಿ ಮಾಡುವ ವಿಧಾನ ಇಲ್ಲಿದೆ ನೋಡಿ.
ಒಂದು ಬಾಣಲೆಗೆ 3 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಅದಕ್ಕೆ 2 ಹಸಿಮೆಣಸನ್ನು ಚಿಕ್ಕದ್ದಾಗಿ ಕತ್ತರಿಸಿ ಹಾಕಿ 2 ನಿಮಿಷಗಳ ಕಾಲ ಬಾಡಿಸಿಕೊಳ್ಳಿ. ನಂತರ 2 ಈರುಳ್ಳಿಯನ್ನು ಸಣ್ಣದ್ದಾಗಿ ಕತ್ತರಿಸಿಕೊಂಡು ಹಾಕಿ ಅದು ಕೆಂಪಾಗುವವರೆಗೆ ಹುರಿಯಿರಿ. ಅದಕ್ಕೆ ಒಂದು ಸಣ್ಣ ಟೊಮೆಟೊವನ್ನು ಕತ್ತರಿಸಿ ಹಾಕಿ. ಯಾವುದೇ ಕಾರಣಕ್ಕೂ ಟೊಮೆಟೊದ ಬೀಜ ಹಾಕಬೇಡಿ.
ನಂತರ ಅದಕ್ಕೆ 1 ಟೀ ಸ್ಪೂನ್ ಖಾರದಪುಡಿ, 1 ಟೀ ಸ್ಪೂನ್ ಧನಿಯಾ ಪುಡಿ, ಚಿಟಿಕೆ ಅರಿಶಿನ, ಸ್ವಲ್ಪ ಉಪ್ಪು, 1 ಟೀ ಸ್ಪೂನ್ ಗರಂ ಮಸಾಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಟೊಮೆಟೊವನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಒಂದು ಬೌಲ್ ಗೆ 4 ಮೊಟ್ಟೆಯನ್ನು ಒಡೆದು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಇದನ್ನು ಬೆಂದ ಟೊಮೆಟೊಕ್ಕೆ ಈ ಮೊಟ್ಟೆಯ ಮಿಶ್ರಣ ಹಾಕಿ 2 ನಿಮಿಷಗಳ ಕಾಲ ಹಾಗೆಯೇ ಬಿಡಿ. ಆಮ್ಲೆಟ್ ರೀತಿ ಆಗುತ್ತದೆ. ನಂತರ ಸೌಟಿನ ಸಹಾಯದಿಂದ ಚೆನ್ನಾಗಿ ಮಿಕ್ಸ್ ಮಾಡಿ. ಕೊತ್ತಂಬರಿ ಸೊಪ್ಪು ಹಾಕಿ 1 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಂಡರೆ ರುಚಿಕರವಾದ ಎಗ್ ಬುರ್ಜಿ ಸವಿಯಲು ಸಿದ್ಧ.