
ಕೊರೊನಾದಿಂದಾಗಿ ಜೀವರಕ್ಷಕ ಆಕ್ಸಿಜನ್ ಸಿಲಿಂಡರ್ ಗಳಿಗೆ ಕೃತಕ ಅಭಾವ ಸೃಷ್ಟಿಯಾಗಿದ್ದು, ಹೈದರಾಬಾದಿನಲ್ಲಿ ಆಕ್ಸಿಜನ್ ಸಿಲಿಂಡರ್ ಕಾಳದಂಧೆ ನಡೆಸುತ್ತಿದ್ದ ತಂಡವನ್ನು ಬಂಧಿಸಲಾಗಿದೆ.
ಶೇಖ್ ಅಕ್ಬರ್ (36) ಎಂಬಾತನನ್ನು ಬಂಧಿಸಿರುವ ಪೊಲೀಸರು, 19 ಆಕ್ಸಿಜನ್ ಸಿಲಿಂಡರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಯಾವುದೇ ಪರವಾನಗಿ ಪಡೆಯದೆಯೇ ಬಾಬಾ ಗ್ಯಾಸ್ ಏಜೆನ್ಸಿ ಮೂಲಕ ಸಿಲಿಂಡರ್ ಗಳನ್ನ ಖರೀದಿಸಿರುವ ಈತ, ಕಾರ್ಬನ್ ಡೈ ಆಕ್ಸೈಡ್ ಹಾಗೂ ಎಲ್ ಪಿ ಜಿ ಸಿಲಿಂಡರ್ ಗಳಿಗೇ ಆಕ್ಸಿಜನ್ ತುಂಬಿಸಿಟ್ಟುಕೊಂಡು, ನಂತರ ಮೆಡಿಕಲ್ ಕಿಟ್ ಮೂಲಕ ಮಾರುತ್ತಿದ್ದ.
ಸಾಲದ್ದಕ್ಕೆ ತಾನೊಬ್ಬ ಸಗಟು ವ್ಯಾಪಾರಿ ಎಂದು ಹೇಳಿಕೊಂಡು ಚಿಲ್ಲರೆ ಮಾರಾಟಗಾರರಿಗೆ ಕಮಿಷನ್ ಆಧಾರದ ಮೇಲೆ ಕೂಡ ಸಿಲಿಂಡರ್ ಮಾರಿ ಹಣ ಮಾಡುತ್ತಿದ್ದ. ಪ್ರತಿ ಸಿಲಿಂಡರ್ ಬೆಲೆ 1 ಲಕ್ಷ ರೂ. ನಿಗದಿಪಡಿಸಿದ್ದ. ವಿಷಯ ತಿಳಿದ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಈ ದಂಧೆಯ ಹಿಂದೆ ದೊಡ್ಡ ಗುಂಪೇ ಇದ್ದು, ಉಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.