ಬಿಸಿ ಬಿಸಿ ಅನ್ನಕ್ಕೆ ರಸಂ ಹಾಕಿಕೊಂಡು ಸವಿಯುತ್ತಿದ್ದರೆ ಅದರ ರುಚಿನೇ ಬೇರೆ. ಇಲ್ಲಿ ಬಿಟ್ರೂಟ್ ರಸಂ ಮಾಡುವ ವಿಧಾನ ಇದೆ. ಪಲ್ಯ ಮಾಡುವುದಕ್ಕೆಂದು ಬಿಟ್ರೂಟ್ ಬೇಯಿಸಿಕೊಂಡು ನೀರನ್ನು ಸೋಸಿ ಇಟ್ಟುಕೊಂಡಿದ್ದರೆ, ಆ ನೀರನ್ನು ಬಿಸಾಡುವ ಬದಲು ಅದರಿಂದ ರುಚಿಯಾದ ರಸಂ ಮಾಡಬಹುದು.
ಬಿಟ್ರೂಟ್ ಬೇಯಿಸಿದ ನೀರು ಎಷ್ಟು ಇರುತ್ತದೊ ಅಷ್ಟು ಎತ್ತಿಟ್ಟುಕೊಳ್ಳಿ. ¼ ಕಪ್ ನಷ್ಟು ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು ಒಂದು ಕುಕ್ಕರ್ ಗೆ ಹಾಕಿ ಸ್ವಲ್ಪ ನೀರು, ಚಿಟಿಕೆ ಅರಿಶಿನ, ಸ್ವಲ್ಪ ಎಣ್ಣೆ ಹಾಕಿ 2 ವಿಷಲ್ ಕೂಗಿಸಿಕೊಳ್ಳಿ. ನಂತರ ಬಾಣಲೆಯೊಂದನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ¼ ಟೀ ಸ್ಪೂನ್ ಸಾಸಿವೆ, ¼ ಟೀ ಸ್ಪೂನ್ ಜೀರಿಗೆ ಹಾಕಿ ಅದು ಸಿಡಿಯುತ್ತಲೆ ಕರಿಬೇವು ಸ್ವಲ್ಪ, ಹಸಿಮೆಣಸು 4 ಸೀಳಿದ್ದು, 1 ಟೊಮೆಟೊ ಹಣ್ಣನ್ನು ಕತ್ತರಿಸಿಕೊಂಡು ಹಾಕಿ.
ಟೊಮೆಟೊ ಮೆತ್ತಗಾದ ನಂತರ ಬೇಯಿಸಿಟ್ಟುಕೊಂಡ ಬಿಟ್ರೂಟ್ ನೀರು ಸೇರಿಸಿ ಅದು ಕುದಿ ಬರಲು ಆರಂಭಿಸುತ್ತಿದ್ದಂತೆ ಅದಕ್ಕೆ ಬೇಯಿಸಿಟ್ಟುಕೊಂಡು ಬೇಳೆ, ಉಪ್ಪು, 2 ಟೇಬಲ್ ಸ್ಪೂನ್ ಹುಣಸೆ ಹಣ್ಣಿನ ರಸ, ಸಣ್ಣ ತುಂಡು ಬೆಲ್ಲ ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಕೊನೆಗೆ ಕೊತ್ತಂಬರಿ ಸೊಪ್ಪು ಸೇರಿಸಿ ಗ್ಯಾಸ್ ಆಫ್ ಮಾಡಿ.