ವಿಶ್ವದಲ್ಲಿ ಕೊರೊನಾ ಕಾಣಿಸಿಕೊಂಡ ದಿನದಿಂದ ಹಾಗೂ ಲಾಕ್ ಡೌನ್ ಜಾರಿಯಾದಾಗಿನಿಂದ ನೂರಾರು ವಿಭಿನ್ನ ಕಥೆಗಳು ಕೇಳಿಬಂದಿದೆ. ಆದರೆ ಇಲ್ಲೊಬ್ಬ ಸಾಹಸಿ ಯುವಕ ಸ್ಕಾಟ್ಲ್ಯಾಂಡ್ನಿಂದ ಗ್ರೀಸ್ ತನಕ ಸೈಕಲ್ ನಲ್ಲಿ ಹೋಗುವ ಮೂಲಕ ಹುಬ್ಬೇರುವಂತೆ ಮಾಡಿದ್ದಾನೆ.
ಹೌದು, ಯುಕೆನಲ್ಲಿ ಓದುತ್ತಿರುವ ಕ್ಲೆಯಾನ್ ಪಪಡಿಮಿಟ್ರಿಯೋ ಎನ್ನುವ ಯುವಕ, ತನ್ನ ತವರೂರು ಅಥೆನ್ಸ್ಗೆ ಹೋಗಬೇಕು ಎಂದು ನಿರ್ಧರಿಸಿದ. ಆದರೆ ಆ ವೇಳೆಗೆ ಯುಕೆನಲ್ಲಿ ಲಾಕ್ ಡೌನ್ ಆಗಿದ್ದರಿಂದ, ಯಾವುದೇ ಕಾನೂನು ಹಾಗೂ ಸಾಮಾಜಿಕ ಅಂತರಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಸೈಕಲ್ ನಲ್ಲಿ ಪ್ರಯಾಣಿಸಲು ನಿರ್ಧರಿಸಿ, ಬರೋಬ್ಬರಿ 3218 ಕಿ.ಮೀ. ದೂರದ ಪ್ರಯಾಣವನ್ನು ಆರಂಭಿಸಿದ.
ಈ ಐತಿಹಾಸಿಕ ಪ್ರಯಾಣದ ವೇಳೆ ಆತ ಜರ್ಮನಿ, ಆಸ್ಟ್ರೀಯಾ ಹಾಗೂ ಇಟಲಿಯನ್ನು ದಾಟಿ ಗ್ರೀಸ್ ತಲುಪಬೇಕಿತ್ತು. ಆದ್ದರಿಂದ ಸೈಕಲ್ನೊಂದಿಗೆ ಬ್ರೆಡ್, ಟೆಂಟ್ ಹಾಗೂ ಡ್ರೈ ಫ್ರೂಟ್ಗಳನ್ನು ಹೊತ್ತ 30 ಕೆಜಿ ತೂಕದ ಬ್ಯಾಗನ್ನು ಸೈಕಲ್ ಗೆ ಕಟ್ಟಿಕೊಂಡು ಹೊರಟಿದ್ದಾನೆ. ಮೇ 10ರಂದು ಆರಂಭಿಸಿದ ಪ್ರಯಾಣದಲ್ಲಿ ಹಾಲೆಂಡ್ಗೆ ಫೆರಿ ಮೂಲಕ ತೆರಳಿದ್ದಾನೆ. ಬಳಿಕ ಅಲ್ಲಿಂದ ಸೈಕಲ್ ಸವಾರಿ ಮಾಡಿಕೊಂಡು ಗ್ರೀಸ್ ನ ಅಥೆನ್ಸ್ ಮುಟ್ಟಿದ್ದಾನೆ.
ಪ್ರಯಾಣದ ಬಗ್ಗೆ ಮಾತನಾಡಿರುವ ಯುವಕ, ನಾನು ಸೈಕಲ್ ಸವಾರಿ ಮಾಡಿದಾಗ ಮಂಜು, ಗಾಳಿ, ಬಿರುಗಾಳಿ, ಮಳೆಯಂತಹ ಹಲವು ಸವಾಲು ಎದುರಿಸಿದೆ. ಆದರೆ ನನಗೆ ಸಾಹಸ ಇಷ್ಟವಾಗಿದ್ದರಿಂದ ಈ ಎಲ್ಲವನ್ನು ಗೆದ್ದು ಮನೆಗೆ ಹಿಂದಿರುಗಿದೆ. ಈ ಪ್ರಯಾಣದಲ್ಲಿ ಜೀವನ ನಿಭಾಯಿಸುವುದನ್ನು ಕಲಿತೆ ಎಂದಿದ್ದಾನೆ.