ಹಿರಿಯೂರು: ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ವ್ಯಾಪ್ತಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರನ್ನು ತರಲಾಗಿದೆ ಎಂದು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕ ಯಶವಂತ ರಾಜು ತಿಳಿಸಿದ್ದಾರೆ.
ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿರುವ ಸದಸ್ಯರನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿ ನೋಂದಣಿ ಮಾಡುವ ಬಗ್ಗೆ ಕೇಂದ್ರ ಸರ್ಕಾರದ ಪಶುಸಂಗೋಪನಾ ಮತ್ತು ಡೇರಿ ಇಲಾಖೆ ಆದೇಶ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.
ಮಿಶ್ರ ತಳಿ ರಾಸುಗಳ ನಿರ್ವಹಣೆಗಾಗಿ ಹಾಲು ಉತ್ಪಾದಕರು ಸಹಕಾರಿ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಸಾಲ ಪಡೆಯಬಹುದಾಗಿದೆ. ಮಿಶ್ರತಳಿ ಹಸುವಿಗೆ ಮಾಸಿಕ 7 ಸಾವಿರ ರೂಪಾಯಿಯಂತೆ ಎರಡು ತಿಂಗಳಿಗೆ 14 ಸಾವಿರ ರೂಪಾಯಿ ನೀಡಲಾಗುವುದು. ಮಿಶ್ರತಳಿ ಎಮ್ಮೆಗೆ 16 ಸಾವಿರ ರೂಪಾಯಿ ಸಾಲ ಸೌಲಭ್ಯ ಸಿಗಲಿದೆ. ಗರಿಷ್ಠ 3 ಲಕ್ಷ ರೂಪಾಯಿವರೆಗೂ ಸಾಲ ಸಿಗಲಿದ್ದು 1.60 ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಯಾವುದೇ ಭದ್ರತೆಯನ್ನು ನೀಡಬೇಕಿಲ್ಲ ಎಂದು ಹೇಳಿದ್ದಾರೆ.