Black Lives Matter ಪ್ರತಿಭಟನೆಗಳು ಸಾಗುತ್ತಲೇ ಇರುವಂತೆಯೇ, ಪ್ರತಿಭಟನಾಕಾರರ ಮುಖಗಳನ್ನು ಗುರುತು ಹಿಡಿಯಲು ಖುದ್ದು ಅವರೇ ತೆಗೆದುಕೊಂಡ ಫೋಟೋಗಳನ್ನು ಪೊಲೀಸರು ಶೋಧಿಸುತ್ತಿದ್ದಾರೆ.
ಪ್ರತಿಭಟನೆ ಸೋಗಿನಲ್ಲಿ ಸಿಕ್ಕ ಸಿಕ್ಕದನ್ನೆಲ್ಲಾ ಲೂಟಿ ಮಾಡುವ ಕೆಲ ದಗಾಕೋರರನ್ನು ಪತ್ತೆ ಮಾಡಲು ಪೊಲೀಸರಿಗೆ ಈ ಕ್ಯಾಮೆರಾಗಳೇ ನೆರವಾಗುತ್ತಿವೆ. ಇದೇ ವೇಳೆ ಉದ್ದೇಶಪೂರಿತವಾಗಿ ಪೊಲೀಸರು ಕೆಲ ಅಮಾಯಕರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದೀಗ ಪ್ರತಿಭಟನಾಕಾರರನ್ನು ಗುರುತು ಹಿಡಿಯದಂತೆ ಮಾಡಲು ಹೊಸ ಕಿರು ತಂತ್ರಾಂಶವೊಂದನ್ನು ಬಿಡುಗಡೆ ಮಾಡಲಾಗಿದೆ. Anonymous Camera ಹೆಸರಿನ ಈ ಹೊಸ ತಂತ್ರಾಂಶವನ್ನು iOS App Store ಶುಕ್ರವಾರ ಬಿಡುಗಡೆ ಮಾಡಿದೆ. ಇದರ ಮೂಲಕ ಪ್ರತಿಭಟನಾಕಾರರ ಮುಖಗಳನ್ನು ಸಂಪೂರ್ಣವಾಗಿ ಬ್ಲಾಕ್ ಔಟ್ ಮಾಡಬಹುದಾಗಿದ್ದು, ಅವರ ಖಾಸಗೀತನವನ್ನು ರಕ್ಷಿಸಬಹುದಾಗಿದೆ. ಇಷ್ಟು ಮಾತ್ರವಲ್ಲದೇ ಪ್ರತಿಭಟನಾಕಾರರ ದನಿಯನ್ನೂ ಸಹ ಈ ಕಿರು ತಂತ್ರಾಂಶ ರೂಪಾಂತರಗೊಳಿಸುವ ಮೂಲಕ ಅವರ ಖಾಸಗೀತನಕ್ಕೆ ಸಂಪೂರ್ಣ ರಕ್ಷಣೆ ನೀಡುವ ಉದ್ದೇಶ ಹೊಂದಿದೆ.