ರಕ್ಷಣಾ ಹೆಲಿಕಾಪ್ಟರ್ ಒಂದಕ್ಕೆ ಕಟ್ಟಿದ್ದ ಸ್ಟ್ರೆಚರ್ ಒಂದರಲ್ಲಿ 74 ವರ್ಷದ ವೃದ್ಧೆಯೊಬ್ಬರು ಇದ್ದಂತೆಯೇ ಅದು ಗಿರಗಿರನೇ ತಿರುಗಿದ ವಿಡಿಯೋ ಒಂದು ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು.
ಗುಡ್ಡವೊಂದನ್ನು ಏರುವ ವೇಳೆ ಗಾಯಗೊಂಡ ಕಟಲಿನ್ ಹೆಸರಿನ ಆ ಮಹಿಳೆಯನ್ನು ಫೀನಿಕ್ಸ್ ಅಗ್ನಿಶಾಮಕ ದಳವು ಹಾಗೆ ಹೊತ್ತುಕೊಂಡು ಸುರಕ್ಷಿತ ಜಾಗವೊಂದಕ್ಕೆ ಕರೆದೊಯ್ಯುತ್ತಿರುವುದಾಗಿ ಬಳಿಕ ತಿಳಿದುಬಂದಿತ್ತು. ಆ ಸ್ಟೋಕ್ಸ್ ಬುಟ್ಟಿಗೆ ಕಟ್ಟಲಾಗಿದ್ದ ಹಗ್ಗದ ವ್ಯವಸ್ಥೆಯಲ್ಲಿ ಆದ ದೋಷದ ಕಾರಣ ಈ ರೀತಿ ಆಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದರು.
ಕಾರ್ಯಾಚರಣೆ ವೇಳೆ ಆದ ಈ ಪ್ರಮಾದದಿಂದಾಗಿ ಆ ಸ್ಟೋಕ್ಸ್ ಬುಟ್ಟಿಯು 174 ಬಾರಿ ಗಿರಕಿ ಹೊಡೆದು ಕಟಲಿನ್‌ಗೆ ಮಣಿಕಟ್ಟು ಹಾಗೂ ಸೊಂಟದಲ್ಲಿ ಗಾಯಗಳಾಗಿದ್ದವು. ಆ ಘಟನೆ ನಡೆದು ಒಂದು ವರ್ಷ ಕಳೆದ ಬಳಿಕ, ಕಟಲಿನ್ ಇದೀಗ ಆ ಮಟ್ಟದ ನಿರ್ಲಕ್ಷ್ಯ ಭರಿತ ರಕ್ಷಣಾ ಕಾರ್ಯಾಚರಣೆ ವಿರುದ್ಧ ದೂರು ಸಲ್ಲಿಸಿ $2 ದಶಲಕ್ಷ ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.