ಮಾಂಸಾಹಾರ ಪ್ರಿಯರಿಗೆ ಹೊಸ ಹೊಸ ರಚಿಕರ ನಾನ್ ವೆಜ್ ಮಾಡಿಕೊಂಡು ಸವಿಯುವ ಆಸೆ ಆಗುತ್ತದೆ. ಇಲ್ಲಿ ಸುಲಭವಾಗಿ ಮಾಡಿಕೊಂಡು ಸವಿಯುವ ಮಟನ್ ಸುಕ್ಕಾ ವಿಧಾನವಿದೆ ಟ್ರೈ ಮಾಡಿ ನೋಡಿ.
ಮೊದಲಿಗೆ 1 ಕೆ.ಜಿ ಮಟನ್ ಅನ್ನು ಚೆನ್ನಾಗಿ ತೊಳೆದು ನೀರು ಬಸಿದುಕೊಂಡು ಅದಕ್ಕೆ 1 ಚಮಚ ಉಪ್ಪು, 1 ಚಮಚ ಖಾರದಪುಡಿ, 1 ಟೀ ಚಮಚ ಗರಂ ಮಸಾಲ, ¼ ಟೀ ಸ್ಪೂನ್ ಅರಿಶಿನ, 2 ಚಮಚ ಲಿಂಬೆ ಹಣ್ಣಿನ ರಸ, 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 3 ಗಂಟೆಗಳ ಕಾಲ ಹಾಗೆಯೇ ಇಡಿ. ಫ್ರಿಡ್ಜ್ ನಲ್ಲಿಟ್ಟರೆ ಒಳ್ಳೆಯದು.
ನಂತರ ಇದನ್ನು ಹೊರತೆಗೆದು ½ ಗಂಟೆಗಳ ಕಾಲ ಹಾಗೆಯೇ ಹೊರಗಡೆ ಇಡಿ. ಒಂದು ಕುಕ್ಕರ್ ಈ ಮಟನ್ ಅನ್ನು ಹಾಕಿಕೊಂಡು 3 ಲೋಟ ನೀರು ಹಾಕಿ 6 ವಿಷಲ್ ಕೂಗಿಸಿಕೊಳ್ಳಿ. ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 2 ಚಮಚ ಕಾಳುಮೆಣಸು, 10 ಚಮಚ ಕೊತ್ತಂಬರಿ ಕಾಳು, 1 ಚಮಚ ಜೀರಿಗೆ ½ ಚಮಚ ಮೆಂತೆಕಾಳು, 15 ಬ್ಯಾಡಗಿ ಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ.
ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಪುಡಿಮಾಡಿಟ್ಟುಕೊಳ್ಳಿ. 2 ಕಪ್ ಕಾಯಿತುರಿಯನ್ನು ಒಂದು ಬಾಣಲೆಯಲ್ಲಿ ಹುರಿದುಕೊಂಡು ಮಿಕ್ಸಿಯಲ್ಲಿ ಒಂದು ಸುತ್ತು ರುಬ್ಬಿಟ್ಟುಕೊಳ್ಳಿ. ನಂತರ ಒಂದು ಅಗಲವಾದ ಪಾತ್ರೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಅದು ಬಿಸಿಯಾಗುತ್ತಲೆ ಸಾಸಿವೆ, ಕರಿಬೇವು ಹಾಕಿ 10 ಎಸಳು ಬೆಳ್ಳುಳ್ಳಿ ಕತ್ತರಿಸಿಹಾಕಿ. ತದನಂತರ 2 ದೊಡ್ಡ ಈರುಳ್ಳಿಯನ್ನು ಸಣ್ಣಗೆ ಹಚ್ಚಿ ಹಾಕಿ ಫ್ರೈ ಮಾಡಿಕೊಳ್ಳಿ.
ಕುಕ್ಕರ್ ನಲ್ಲಿದ್ದ ಮಟನ್ ಪೀಸ್ ಗಳನ್ನು ಬಾಣಲೆಗೆ ಹಾಕಿ ಚೆನ್ನಾಗಿ ಕೈಯಾಡಿಸಿ ನಂತರ ಮಾಡಿಟ್ಟುಕೊಂಡ ಮಸಾಲೆ ಸೇರಿಸಿ. ಮಟನ್ ಬೆಂದ ನೀರು ಸ್ವಲ್ಪ ಸ್ವಲ್ಪವೇ ಹಾಕಿ ಬೇಯಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ರುಬ್ಬಿಟ್ಟುಕೊಂಡ ಕಾಯಿತುರಿ ಹಾಕಿ 15 ನಿಮಿಷಗಳ ಕಾಲ ಚೆನ್ನಾಗಿ ಕೈಯಾಡಿಸಿ.