ಮಕ್ಕಳು ಮನೆಯಲ್ಲಿ ತಿಂಡಿಗಾಗಿ ನಿಮ್ಮನ್ನು ಪೀಡಿಸುತ್ತಿದ್ದರೆ ಥಟ್ಟಂತ ಮಾಡಿಕೊಡಿ ಈ ಗೋಧಿ ಹಿಟ್ಟಿನ ಬರ್ಫಿ. ಇದನ್ನು ಬಾಯಲ್ಲಿಟ್ಟರೆ ಬೆಣ್ಣೆಯಂತೆ ಕರಗುತ್ತದೆ. ತುಪ್ಪ, ಬೆಲ್ಲ ಹಾಕಿ ಮಾಡುವುದರಿಂದ ಆರೋಗ್ಯಕರವಾಗಿರುತ್ತದೆ ಕೂಡ.
ಒಂದು ಬಾಣಲೆಗೆ 3 ಟೇಬಲ್ ಸ್ಪೂನ್ ತುಪ್ಪ ಹಾಕಿ ಅದು ಕರಗುತ್ತಿದ್ದಂತೆ ಅದಕ್ಕೆ 1 ಕಪ್ ಗೋಧಿ ಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. 5 ನಿಮಿಷಗಳ ಕಾಲ ಹುರಿದರೆ ಸಾಕು. ಗೋಧಿ ಹಿಟ್ಟಿನ ಬಣ್ಣ ಕಂದು ಬಣ್ಣ ಬರುವವರೆಗೆ ಹುರಿಯಿರಿ. ತಳ ಹತ್ತದಂತೆ ಎಚ್ಚರ ವಹಿಸಿ. ಗೋಧಿ ಹಿಟ್ಟು ಬಣ್ಣ ಬದಲಾಗುತ್ತಿದ್ದಂತೆ ತುಪ್ಪ ತಳ ಬಿಡುವುದಕ್ಕೆ ಶುರುವಾಗುತ್ತದೆ.
ಅಲ್ಲಿಯ ತನಕ ಚೆನ್ನಾಗಿ ಹುರಿಯುತ್ತ ಇರಿ. ನಂತರ ಗ್ಯಾಸ್ ಆಫ್ ಮಾಡಿ. ಇದು ತಣ್ಣಗಾಗುವುದಕ್ಕೆ ಬಿಟ್ಟುಬಿಡಿ. ನಂತರ ಇದಕ್ಕೆ ¾ ಕಪ್ ಬೆಲ್ಲದ ಪುಡಿ, ಚಿಟಿಕೆ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಒಂದು ತಟ್ಟೆಗೆ ತುಪ್ಪ ಸವರಿ ಈ ಮಿಶ್ರಣವನ್ನು ತಟ್ಟೆಗೆ ಹಾಕಿ ಚೆನ್ನಾಗಿ ಪ್ರೆಸ್ ಮಾಡಿ. 5 ನಿಮಿಷಗಳ ಬಿಟ್ಟು ಬಿಡಿ. ನಂತರ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ.