ಬೆಳಿಗ್ಗಿನ ತಿಂಡಿಗೆ ದಿನಾ ಇಡ್ಲಿ, ದೋಸೆ, ಉಪ್ಪಿಟ್ಟು ತಿಂದು ಬೇಜಾರಾದವರು ಒಮ್ಮೆ ರುಚಿಕರವಾದ ಪಾಲಕ್ ಸೊಪ್ಪಿನ ತಾಲಿಪಟ್ಟು ಮಾಡಿ ಸವಿಯಿರಿ. ಮಾಡುವುದಕ್ಕೂ ಅಷ್ಟೇನೂ ಕಷ್ಟವಿಲ್ಲ. ಜತೆಗೆ ತಿನ್ನುವುದಕ್ಕೆ ರುಚಿಕರ ಹಾಗೂ ಆರೋಗ್ಯಕರವಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಾಗ್ರಿಗಳು-1/2 ಕಪ್ ಗೋಧಿ ಹಿಟ್ಟು , ¼ ಕಪ್ ಕಡಲೇ ಹಿಟ್ಟು, ಅರ್ಧ ಕಪ್ ಅಕ್ಕಿ ಹಿಟ್ಟು, ¼ ಕಪ್ ರಾಗಿ ಹಿಟ್ಟು, ಈರುಳ್ಳಿ ಸಣ್ಣಗೆ ಹಚ್ಚಿದ್ದು, ಪಾಲಾಕ್ ಸೊಪ್ಪು 1 ಕಪ್ ಸಣ್ಣಗೆ ಹಚ್ಚಿಟ್ಟುಕೊಂಡಿದ್ದು, ಖಾರದ ಪುಡಿ-2 ಚಮಚ, ಬೆಳ್ಳುಳ್ಳಿ ಮಿಶ್ರಣ-1/2 ಟೀ ಸ್ಪೂನ್, ಹಸಿಮೆಣಸು ಸಣ್ಣಗೆ ಹೆಚ್ಚಿಟ್ಟುಕೊಂಡಿದ್ದು 3, ಕೊತ್ತಂಬರಿ ಸೊಪ್ಪು-1/4 ಕಪ್, ಕೊತ್ತಂಬರಿ ಪುಡಿ-1 ಟೀ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ 2 ದೊಡ್ಡ ಚಮಚ.
ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಿಸಿ ನೀರಿನ ಪಾತ್ರೆ ಇಟ್ಟು ಅದಕ್ಕೆ ತೊಳೆದು ಕತ್ತರಿಸಿಟ್ಟುಕೊಂಡ ಪಾಲಾಕ್ ಸೊಪ್ಪನ್ನು ಹಾಕಿ ಅದೇ ಕೂಡಲೇ ತೆಗೆಯಿರಿ. ಒಂದು ದೊಡ್ಡ ಬೌಲ್ ಗೆ ಎಲ್ಲಾ ಹಿಟ್ಟುಗಳನ್ನು ಸೇರಿಸಿ ಅದಕ್ಕೆ ಉಪ್ಪು, ಖಾರದಪುಡಿ, ಕೊತ್ತಂಬರಿಸೊಪ್ಪು , ಕೊತ್ತಂಬರಿಕಾಳಿನ ಪುಡಿ, ಪಾಲಾಕ್ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ಒಂದು ಮುಚ್ಚಳ ಮುಚ್ಚಿ 15 ನಿಮಿಷ ಹಾಗೇ ಇಟ್ಟು ಬಿಡಿ.
ನಂತರ ಗ್ಯಾಸ್ ಮೇಲೆ ತವಾ ಇಟ್ಟು ಅದಕ್ಕೆ ತುಸು ಎಣ್ಣೆ ಸವರಿಕೊಳ್ಳಿ. ನಂತರ ಒಂದು ಬಟರ್ ಪೇಪರ್ ಅಥವಾ ಬಾಳೆ ಎಲೆ ತೆಗೆದುಕೊಂಡು ಅದರ ಮೇಲೆ ತುಸು ಎಣ್ಣೆ ಸವರಿ ಹಿಟ್ಟಿನ ಮಿಶ್ರಣದಿಂದ ಮಧ್ಯಮ ಗಾತ್ರದ ಉಂಡೆ ತೆಗೆದುಕೊಂಡು ಬಟರ್ ಪೇಪರ್ ಮೇಲೆ ಇಟ್ಟು ಕೈಯಿಂದ ತಟ್ಟಿ. ತಟ್ಟುವಾಗ ಹಿಟ್ಟು ಅಂಟಿಕೊಂಡರೆ ಕೈಗೆ ತುಸು ಎಣ್ಣೆ ಸವರಿಕೊಳ್ಳಿ. ಕಾದ ಹಂಚಿನ ಮೇಲೆ ಎರಡೂ ಕಡೆ ಚೆನ್ನಾಗಿ ಬೇಯಿಸಿದರೆ ರುಚಿಕರವಾದ ಪಾಲಾಕ್ ಸೊಪ್ಪಿನ ತಾಲಿಪಟ್ಟು ತಿನ್ನಲು ಸಿದ್ಧ. ಮೊಸರಿನೊಂದಿಗೆ ಸವಿಯಲು ಚೆನ್ನಾಗಿರುತ್ತದೆ.