ಪುಡ್ಡಿಂಗ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಾಯಿಚಪ್ಪರಿಸಿಕೊಂಡು ತಿನ್ನುತ್ತಾರೆ. ಇಂದು ಕ್ಯಾರೆಟ್ ಪುಡ್ಡಿಂಗ್ ಮಾಡುವ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಇದನ್ನು ಮಾಡಿದರೆ ನೋಡುವುದಕ್ಕೆ ಚೆನ್ನಾಗಿರುತ್ತದೆ. ತಿನ್ನುವುದಕ್ಕೂ ಸೂಪರ್ ಆಗಿರುತ್ತದೆ. ಪಾರ್ಟಿಗಳಲ್ಲಿ ಕೂಡ ಇದನ್ನು ಮಾಡಿ ಸವಿಯಬಹುದು.
ಬೇಕಾಗುವ ಸಾಮಾಗ್ರಿಗಳು: 1 ಕಪ್ ಸಣ್ಣಗೆ ಕತ್ತರಿಸಿಟ್ಟುಕೊಂಡ ಕ್ಯಾರೆಟ್, 2 ಕಪ್-ಹಾಲು, ತೆಂಗಿನ ಕಾಯಿ ತುರಿ-1/4 ಕಪ್, ಕಂಡೆನ್ಸಡ್ ಮಿಲ್ಕ್ -1/2 ಕಪ್, ಸಕ್ಕರೆ-3/4 ಕಪ್, ಚೈನಾಗ್ರಾಸ್-8 ಗ್ರಾಂ.
ಮಾಡುವ ವಿಧಾನ: ಒಂದು ಮಿಕ್ಸಿ ಜಾರಿಗೆ ಕತ್ತರಿಸಿಟ್ಟುಕೊಂಡ ಕ್ಯಾರೆಟ್ ಹಾಕಿ ಅದಕ್ಕೆ ತುಸು ನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ಸಣ್ಣ ಉರಿಯಲ್ಲಿ ತುಸು ನೀರು ಇಟ್ಟು ಅದಕ್ಕೆ ಚೈನಾ ಗ್ರಾಸ್ ಸೇರಿಸಿ ಕರಗಿಸಿಕೊಳ್ಳಿ. ಅದು ಕರಗಿದ ನಂತರ ಗ್ಯಾಸ್ ಆಫ್ ಮಾಡಿ. ನಂತರ ಹಾಲನ್ನು ಗ್ಯಾಸ್ ಮೇಲೆ ಇಟ್ಟು ಅದು ಎರಡು ಕುದಿ ಬರುತ್ತಲೇ ಸಕ್ಕರೆ ಹಾಗೂ ಕಂಡೆನ್ಸಡ್ ಮಿಲ್ಕ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಇದಕ್ಕೆ ಕ್ಯಾರೆಟ್ ಮಿಶ್ರಣವನ್ನು ಸೇರಿಸಿ. ಕರಗಿಸಿಟ್ಟುಕೊಂಡ ಚೈನಾಗ್ರಾಸ್ ಅನ್ನು ಸೋಸಿಕೊಂಡು ಕ್ಯಾರೆಟ್ ಮಿಶ್ರಣಕ್ಕೆ ಸೇರಿಸಿ. ಇದನ್ನು ಕುದಿಸುವುದು ಬೇಡ ಸ್ವಲ್ಪ ಬಿಸಿಯಾದರೆ ಸಾಕು. ಆಮೇಲೆ ಇದನ್ನು ಪುಡ್ಡಿಂಗ್ ಬೌಲ್ ಗೆ ಹಾಕಿ. ಈ ಮಿಶ್ರಣ ತಣ್ಣಗಾದ ಅದರ ಮೇಲೆ ತೆಂಗಿಕಾಯಿ ತುರಿಯನ್ನು ಸ್ವಲ್ಪ ಹಾಕಿ ಅಲಂಕರಿಸಿ ನಂತರ ಫ್ರಿಡ್ಜ್ ನಲ್ಲಿ ಸರಿಯಾಗಿ ಸೆಟ್ ಆಗುವುದಕ್ಕೆ 5 ಗಂಟೆಗಳ ಕಾಲ ಇಟ್ಟರೆ ರುಚಿಕರವಾದ ಪುಡ್ಡಿಂಗ್ ರೆಡಿ.