
ಮಕ್ಕಳಿಗೆ ಸಂಜೆ ಸ್ನ್ಯಾಕ್ಸ್ ಅಥವಾ ಮನೆಗೆ ಯಾರಾದರೂ ಥಟ್ಟಂತ ಬಂದಾಗ ಏನು ಮಾಡಲಿ ಎಂಬ ಚಿಂತೆಯಲ್ಲಿ ಇರುವವರಿಗೆ ಇಲ್ಲಿ ಒಂದು ಬೇಗನೆ ಆಗುವ ತಿಂಡಿ ಇದೆ.
ಒಂದು ಪ್ಯಾಕ್ ಬ್ರೆಡ್ ಇದ್ದರೆ ಸಾಕು ಥಟ್ಟಂತ ಈ ತಿಂಡಿ ರೆಡಿಯಾಗುತ್ತೆ. ಮಾಡುವುದಕ್ಕೆ ಕೂಡ ಸುಲಭ ಜತೆಗೆ ತಿನ್ನುವುದಕ್ಕೂ ರುಚಿಕರವಾಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು:
2 ಟೇಬಲ್ ಸ್ಪೂನ್-ಎಣ್ಣೆ, ಚಿಟಿಕೆ –ಇಂಗು, 1 ಟೀ ಸ್ಪೂನ್ –ಸಾಸಿವೆ, 5-6-ಕರಿಬೇವು, 2 ಮೆಣಸಿನಕಾಯಿ, ½ ಕಪ್ ಕಡಲೇಕಾಯಿ ಬೀಜ, 1 ಟೀ ಸ್ಪೂನ್ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, 4 ಬ್ರೆಡ್ ಪೀಸ್ ಅನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ, 2 ಹಸಿಮೆಣಸು, 1 ಟೇಬಲ್ ಸ್ಪೂನ್ ಲಿಂಬೆ ಹಣ್ಣಿನ ರಸ, ½ ಕಪ್ ಕೊತ್ತಂಬರಿಸೊಪ್ಪು, ಸ್ವಲ್ಪ ತೆಂಗಿನತುರಿ.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಅದು ಬಿಸಿಯಾದಾಗ ಚಿಟಿಕೆ ಇಂಗು ಹಾಕಿ ನಂತರ ಸಾಸಿವೆ, ಕರಿಬೇವು, ಒಣಮೆಣಸು ಹಾಕಿ. ನಂತರ ಹುರಿದಿಟ್ಟುಕೊಂಡ ಕಡಲೇಕಾಯಿ ಬೀಜ ಹಾಕಿ ಆಮೇಲೆ ಅರಿಶಿನ, ಉಪ್ಪನ್ನು ಹಾಕಿ ಮಿಕ್ಸ್ ಮಾಡಿ.
ನಂತರ ಬ್ರೇಡ್ ಪೀಸ್ ಗಳನ್ನು ಹಾಕಿ ಮಿಶ್ರಣ ಮಾಡಿ. ಇದಕ್ಕೆ ಸ್ವಲ್ಪ ನೀರನ್ನು ಚಿಮಿಕಿಸಿಕೊಳ್ಳಿ. ನಂತರ ಹಸಿಮೆಣಸು, ಲಿಂಬೆಹಣ್ಣಿನ ರಸ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬೇಕಿದ್ದರೆ ತೆಂಗಿನ ತುರಿ ಸೇರಿಸಿ 2 ನಿಮಿಷ ಕೈಯಾಡಿಸಿದರೆ ರುಚಿಕರವಾದ ಬ್ರೆಡ್ ಒಗ್ಗರಣೆ ರೆಡಿ.