ಬಿರಿಯಾನಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಮಾಂಸಹಾರಿಗಳಿಗಂತೂ ಬಿರಿಯಾನಿ ಎಂದರೆ ಬಾಯಲ್ಲಿ ನೀರು ಬರುತ್ತದೆ. ವಾರಾಂತ್ಯದಲ್ಲಿ ಮನೆ ಮಂದಿಯೆಲ್ಲ ಸೇರಿದಾಗ ಈ ರುಚಿಕರವಾದ ಬ್ಯಾಂಬೂ ಬಿರಿಯಾನಿಯನ್ನು ಒಮ್ಮೆ ಮಾಡಿ ಸವಿಯಿರಿ. ಮಾಡುವ ವಿಧಾನ ಕೂಡ ಸುಲಭವಿದೆ.
ಅರ್ಧ ಕೆಜಿ ಚಿಕನ್, 2 ಟೇಬಲ್ ಸ್ಪೂನ್-ಉಪ್ಪು, 1 ಟೀ ಸ್ಪೂನ್ –ಕಾಳುಮೆಣಸಿನ ಪುಡಿ, ½ ಟೀ ಸ್ಪೂನ್ ಅರಿಶಿನ ಪುಡಿ, 1 ಟೀ ಸ್ಪೂನ್ ಅರಿಶಿನ ಪುಡಿ, 1 ಟೀ ಸ್ಪೂನ್ ಕೊತ್ತಂಬರಿ ಪುಡಿ, ½ ಟೀ ಸ್ಪೂನ್ ಜೀರಿಗೆ ಪುಡಿ, 1ಟೀ ಸ್ಪೂನ್ ಬಿರಿಯಾನಿ ಮಸಾಲಾ, 2 ಟೇಬಲ್ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, 4 ಹಸಿಮೆಣಸು, ಕೊತ್ತಂಬರಿ ಸೊಪ್ಪು ಸ್ವಲ್ಪ, ಪುದೀನಾ ಸೊಪ್ಪು ಸ್ವಲ್ಪ, ½ ಕಪ್ ಮೊಸರು, 2 ಕಪ್-ಬಾಸುಮತಿ ಅಕ್ಕಿ, 4 ಟೀ ಸ್ಪೂನ್ ತುಪ್ಪ, ಗರಂ ಮಸಾಲ
ಒಂದು ಬೌಲ್ ಗೆ ಚಿಕನ್ ಹಾಕಿ ಅದಕ್ಕೆ ಮೊಸರು, ಗರಂ ಮಸಾಲ, ಉಪ್ಪು, ಅರಿಶಿನ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಬಿರಿಯಾನಿ ಮಸಾಲ, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಸ್ವಲ್ಪ ಎಣ್ಣೆ, ಅರ್ಧ ಲಿಂಬೆಹಣ್ಣಿನ ರಸ ಹಾಕಿ 1 ಗಂಟೆ ಚೆನ್ನಾಗಿ ಮ್ಯಾರಿನೇಟ್ ಮಾಡಿ.
ನಂತರ ಅಕ್ಕಿಯನ್ನು ಒಂದು ಬೌಲ್ ಗೆ ಹಾಕಿ. ಅದಕ್ಕೆ ಎಣ್ಣೆ, ಉಪ್ಪು, ಗರಂ ಮಸಾಲ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಕೆಂಪು ಮೆಣಸಿನ ಪುಡಿ, ಬಿರಿಯಾನಿ ಮಸಾಲ, ಹಸಿಮೆಣಸು, ಪುದೀನಾ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಒಂದು ಗಂಟೆ ಮ್ಯಾರಿನೇಟ್ ಮಾಡಿ.
ಬ್ಯಾಂಬೊ ಅನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಅದರ ಒಳಭಾಗಕ್ಕೆ ಎಣ್ಣೆ ಸವರಿ. ಮೊದಲಿಗೆ 2 ಚಮಚದಷ್ಟು ಮ್ಯಾರಿನೇಟ್ ಮಾಡಿಕೊಂಡು ಚಿಕನ್ ಅನ್ನು ಈ ಬ್ಯಾಂಬೋ ಒಳಗೆ ಹಾಕಿ ನಂತರ 5 ಚಮಚದಷ್ಟು ಅಕ್ಕಿ ಹಾಕಿ. ಹೀಗೆ ಅಕ್ಕಿ ಮತ್ತು ಚಿಕನ್ ಎರಡನ್ನೂ ಹಾಕಿ. ನಂತರ 1 ¼ ಕಪ್ ನಷ್ಟು ನೀರು ಹಾಕಿ. ನಂತರ ಒಂದು ಅಲ್ಯುಮಿನಿಯಂ ಫಾಯಿಲ್ ನಿಂದ ಈ ಬ್ಯಾಂಬೋನ ಮೇಲ್ಭಾಗವನ್ನು ಕವರ್ ಮಾಡಿ. ಹದವಾಗಿ ಉರಿಯುತ್ತಿರುವ ಬೆಂಕಿಯ ಮೇಲೆ ಈ ಬ್ಯಾಂಬೋ ವನ್ನು ಇಡಿ. 30 ನಿಮಿಷ ಚೆನ್ನಾಗಿ ಬೇಯಲಿ. ಬೆಂಕಿಯಿಂದ ತೆಗೆದ ನಂತರ 10 ನಿಮಿಷ ಹಾಗೇಯೇ ಇಡಿ. ಆಮೇಲೆ ತಟ್ಟೆಗೆ ಬಡಿಸಿಕೊಂಡು ತಿನ್ನಿರಿ.