ಪಪ್ಪಾಯ ಹಣ್ಣಿನಲ್ಲಿ ಸಾಕಷ್ಟು ಔಷಧಿ ಗುಣಗಳಿವೆ. ಆದ್ದರಿಂದ ಪಪ್ಪಾಯ ಹಣ್ಣಿಗೆ ತುಂಬಾ ಬೇಡಿಕೆ ಇದೆ. ಪಪ್ಪಾಯ ಹಣ್ಣನ್ನು ಹಾಗೇ ಸೇವಿಸುವುದಕ್ಕಿಂತ ಅದರಲ್ಲಿ ಬರ್ಫಿ ಮಾಡಿದರೆ ಅದರ ರುಚಿಯೇ ಬೇರೆ.
ಪಪ್ಪಾಯ ಬರ್ಫಿ ಗೆ ಬೇಕಾಗುವ ಸಾಮಗ್ರಿಗಳು : ಒಂದು ದೊಡ್ಡ ಗಾತ್ರದ ಪಪ್ಪಾಯ ಹಣ್ಣು, ಬಾಂಬೆ ರವಾ 1/4 ಕೆಜಿ, ಸಕ್ಕರೆ 1/4ಕೆಜಿ, ತುಪ್ಪ- ಒಂದು ಬಟ್ಟಲು, ಏಲಕ್ಕಿಪುಡಿ, ಅರ್ಧಚಮಚ, ಹಾಲು, ಒಂದು ಬಟ್ಟಲು, ಗೋಡಂಬಿ, ದ್ರಾಕ್ಷಿ, ಅರ್ಧ ಬಟ್ಟಲು.
ತಯಾರಿಸುವ ವಿಧಾನ : ಮೊದಲಿಗೆ ಪಪ್ಪಾಯ ಹಣ್ಣಿನ ಸಿಪ್ಪೆಯನ್ನು ತೆಗೆಯಬೇಕು. ನಂತರ ಹಣ್ಣನ್ನು ಸಣ್ಣ ಸಣ್ಣದಾಗಿ ಕತ್ತರಿಸಬೇಕು. ಕತ್ತರಿಸಿದ ತುಂಡುಗಳನ್ನು ಸ್ವಲ್ಪ ರುಬ್ಬಿಕೊಳ್ಳಬೇಕು.
ಒಂದು ಬಾಣಲೆಗೆ ತುಪ್ಪಹಾಕಿ, ಗೋಡಂಬಿ,ದ್ರಾಕ್ಷಿಯನ್ನು ಕರಿದು ಒಂದು ಬದಿಯಲ್ಲಿಡಿ. ಆ ತುಪ್ಪಕ್ಕೆ ಹಾಲು, ರುಬ್ಬಿದ ಮಿಶ್ರಣ, ಸಕ್ಕರೆ ಹಾಕಿ ಕಲುಕುತ್ತಿರಬೇಕು. ರವೆಯನ್ನು ಕೆಂಪಗಾಗುವ ತನಕ ಉರಿಯಬೇಕು. ಮಿಶ್ರಣ ಎಳೆಪಾಕ ಬಂದಾಗ ಹುರಿದ ರವೆಯನ್ನು ಅದಕ್ಕೆ ಹಾಕಿ ಗಂಟುಗಳಾಗದಂತೆ ತಿರುವುತ್ತಿರಬೇಕು. ಮಿಶ್ರಣ ಬಾಣಲೆಯ ತಳ ಬಿಡುತ್ತಾ ಬಂದಾಗ ಏಲಕ್ಕಿಪುಡಿ ಹಾಕಿ, ಒಂದು ತಟ್ಟೆಗೆ ಸ್ವಲ್ಪ ತುಪ್ಪಸವರಿ ಅಗಲವಾಗಿ ಹರಡಿ ಬರ್ಫಿ ಆಕಾರದಲ್ಲಿ ಕತ್ತರಿಸಿ ಅದು ತಣ್ಣಗಾದ ನಂತರ ಬರ್ಫಿಯನ್ನು ಬೇರ್ಪಡಿಸಿ ಅದಕ್ಕೆ ಕರಿದ ಗೋಡಂಬಿ, ದ್ರಾಕ್ಷಿ ಯಿಂದ ಅಲಂಕರಿಸಿ.