ಮಕ್ಕಳು ತುಂಬಾ ಸೂಕ್ಷ್ಮ. ರೋಗ ನಿರೋಧಕ ಶಕ್ತಿ ಅವ್ರಲ್ಲಿ ಕಡಿಮೆಯಿರುತ್ತದೆ. ಇದೇ ಕಾರಣಕ್ಕೆ ಆಗಾಗ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗ್ತಾರೆ. ಚಳಿಗಾಲದಲ್ಲಿ ಮಕ್ಕಳಿಗೆ ಅನಾರೋಗ್ಯ ಕಾಡೋದು ಹೆಚ್ಚು. ಶೀತ, ಕೆಮ್ಮು, ಜ್ವರ ಚಳಿಗಾಲದಲ್ಲಿ ಮಕ್ಕಳನ್ನು ಬಹುಬೇಗ ಆವರಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವುದು ಪಾಲಕರ ದೊಡ್ಡ ಜವಾಬ್ದಾರಿ.
ಚಳಿಗಾಲದಲ್ಲಿ ಮಕ್ಕಳಿಗೆ ಮೈತುಂಬ ಬಟ್ಟೆ ಹಾಕಿ. ಕಿವಿ, ಕಾಲು, ತಲೆ ಮುಚ್ಚಿರಲಿ. ಕಾಲು ಮತ್ತು ತಲೆ ಬೆಚ್ಚಗಿರುವಂತೆ ನೋಡಿಕೊಳ್ಳಿ. ಪಾದಗಳು ಹಾಗೂ ತಲೆ ಮೂಲಕ ಬೇಗ ತಣ್ಣನೆ ಗಾಳಿ ಮಕ್ಕಳ ದೇಹ ಸೇರುತ್ತದೆ. ಹಾಗಾಗಿ 2-3 ಬಟ್ಟೆಗಳನ್ನು ಚಳಿಗಾಲದಲ್ಲಿ ಮಕ್ಕಳಿಗೆ ಹಾಕಿ.
ಮಗು ತುಂಬಾ ಚಿಕ್ಕದಾಗಿದ್ದರೆ ಎರಡು-ಮೂರು ದಿನಗಳಿಗೊಮ್ಮೆ ಸ್ನಾನ ಮಾಡಿಸಿ. ಆದ್ರೆ ಸ್ವಚ್ಛತೆ ಬಹಳ ಮುಖ್ಯ. ಹಾಗಾಗಿ ಬೆಚ್ಚಗಿನ ನೀರಿನಲ್ಲಿ ಸ್ವಚ್ಛ ಬಟ್ಟೆಯನ್ನು ಅದ್ದಿ ಮಕ್ಕಳ ಮೈ ಒರೆಸಿ. ತಣ್ಣನೆ ಗಾಳಿ ಬರುವ ಪ್ರದೇಶದಲ್ಲಿ ಮಕ್ಕಳಿಗೆ ಸ್ನಾನ ಮಾಡಿಸಬೇಡಿ. ಬೆಚ್ಚಗಿರುವ ಸ್ಥಳದಲ್ಲಿ ಮಕ್ಕಳ ಸ್ನಾನ ಮಾಡಿಸಿ.
ಪ್ರತಿ ದಿನ ಮಕ್ಕಳಿಗೆ ಮಸಾಜ್ ಮಾಡಿ. 10-15 ನಿಮಿಷ ಮಸಾಜ್ ಮಾಡಿ. ಮಸಾಜ್ ಮಾಡುವುದ್ರಿಂದ ಮಕ್ಕಳ ಎಲುಬುಗಳ ಬಲ ಪಡೆಯುತ್ತವೆ. ಬಾದಾಮಿ, ಆಲಿವ್ ಆಯಿಲ್ ಅಥವಾ ಮಕ್ಕಳ ಆಯಿಲ್ ಬಳಸಿ ಮಸಾಜ್ ಮಾಡಿ.
ಸೂರ್ಯನ ಕಿರಣದಲ್ಲಿ ವಿಟಮಿನ್ ಡಿ ಇರುತ್ತದೆ. ಹಾಗಾಗಿ ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ಸೂರ್ಯನ ಶಾಖ ಮಕ್ಕಳಿಗೆ ತಾಗಲಿ.
ಮಕ್ಕಳನ್ನು ಮಲಗಿಸುವ ಮೊದಲು ಬೆಡ್ ಶೀಟ್ ಬೆಚ್ಚಗಿರುವಂತೆ ನೋಡಿಕೊಳ್ಳಿ. ಬಿಸಿ ನೀರಿನ ಬಾಟಲಿಯನ್ನು ಬೆಡ್ ಶೀಟ್ ಮೇಲಿಟ್ಟು ಬಿಸಿ ಮಾಡಬಹುದು.