ಊಟದ ಜೊತೆಗೆ ಹಾಗೂ ಬಿಡುವಿನ ವೇಳೆಯಲ್ಲಿ ಕಾಫಿ, ಟೀ ಜೊತೆಗೆ ನಿಪ್ಪಟ್ಟು ಇದ್ದರೆ ಚೆನ್ನ. ವಿಶೇಷವಾದ ಅಕ್ಕಿ ಹಿಟ್ಟಿನ ನಿಪ್ಪಟ್ಟು ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ನೀವೂ ಒಮ್ಮೆ ಮಾಡಿ, ರುಚಿ ನೋಡಿ.
ಬೇಕಾಗುವ ಪದಾರ್ಥಗಳು :
ಅಕ್ಕಿ ಹಿಟ್ಟು – 1/2 ಕೆ.ಜಿ., ಮೈದಾಹಿಟ್ಟು – 1/4 ಕೆ.ಜಿ., ಕಡಲೆ ಹಿಟ್ಟು – 150 ಗ್ರಾಂ, ಕೊಬ್ಬರಿ – 100 ಗ್ರಾಂ., ಅಚ್ಚ ಮೆಣಸಿನ ಪುಡಿ – ಸ್ವಲ್ಪ, ಹುರಿದು ಸಿಪ್ಪೆ ತೆಗೆದ ಕಡಲೆಕಾಯಿ ಬೀಜ – 50 ಗ್ರಾಂ, ಹುರಿಗಡಲೆ – 50 ಗ್ರಾಂ, ಉಪ್ಪು – ಸ್ವಲ್ಪ, ಅಡುಗೆ ಸೋಡಾ – ಸ್ವಲ್ಪ, ಎಣ್ಣೆ – ಕರಿಯಲು ತಕ್ಕಷ್ಟು.
ತಯಾರಿಸುವ ವಿಧಾನ :
ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಕಡಲೆ ಹಿಟ್ಟನ್ನು ಜರಡಿ ಹಿಡಿದು, ಒಂದು ಪಾತ್ರೆಯಲ್ಲಿ ಹಾಕಿ. ಅದಕ್ಕೆ ಸ್ವಲ್ಪ ಉಪ್ಪಿನ ಪುಡಿ, ಮೆಣಸಿನ ಕಾಯಿ ಪುಡಿ, ಸಣ್ಣಗೆ ಹೆಚ್ಚಿಕೊಂಡ ಕೊಬ್ಬರಿ, ಸಿಪ್ಪೆ ತೆಗೆದ ಹುರಿದ ಕಡಲೆಕಾಯಿ ಬೀಜ, ಹುರಿಗಡಲೆ, ಅಡುಗೆ ಸೋಡಾ ಹಾಕಿ ಕಲೆಸಿಕೊಳ್ಳಿ.
ನಂತರದಲ್ಲಿ ಸ್ವಲ್ಪ ಎಣ್ಣೆಯನ್ನು ಕಾಯಿಸಿ, ಅದಕ್ಕೆ ಹಾಕಿ ಕಲೆಸಿರಿ. ಬಳಿಕ ನೀರನ್ನು ಹಾಕಿ ನಿಪ್ಪಟ್ಟು ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಒಲೆಯ ಮೇಲಿಡಿ. ನಿಪ್ಪಟ್ಟು, ಹಿಟ್ಟನ್ನು ಉಂಡೆಗಳನ್ನಾಗಿ ಮಾಡಿಕೊಳ್ಳಿ.
ಎಣ್ಣೆ ಕಾದ ಬಳಿಕ, ಉಂಡೆಗಳನ್ನು ಒಂದು ಪ್ಲಾಸ್ಟಿಕ್ ಹಾಳೆಯ ಮೇಲೆ ತಟ್ಟಿ ಬಾಣಲೆಯಲ್ಲಿ ಹಾಕಿ ಕರಿಯಿರಿ. ಬಳಿಕ ಬೇಕೆನಿಸಿದಾಗ ನಿಪ್ಪಟ್ಟು ರುಚಿಯನ್ನು ಸವಿಯಿರಿ.