ಚಳಿಗಾಲದಲ್ಲಿ ನಾವು ಮಾಡುವ ಸಣ್ಣ ಪುಟ್ಟ ತಪ್ಪಿನಿಂದಾಗಿ ಹಾಸಿಗೆ ಹಿಡಿಯಬೇಕಾಗುತ್ತದೆ. ಕೆಲವೊಂದು ನಿರ್ಲಕ್ಷ್ಯ ನಮ್ಮ ರೋಗಕ್ಕೆ ಕಾರಣವಾಗುತ್ತದೆ. ಹಾಗಾಗಿ ಪ್ರತಿಯೊಂದು ಕೆಲಸದ ಮೇಲೆ ಜಾಗೃತಿ ವಹಿಸುವುದು ಚಳಿಗಾಲದಲ್ಲಿ ಅತಿ ಮುಖ್ಯ.
ಚಳಿಗಾಲ ಬಂತೆಂದ್ರೆ ಪ್ರತಿನಿತ್ಯ ಮಾಡುವ ನಿಮ್ಮ ಕೆಲಸಗಳಲ್ಲಿ ಕೆಲವೊಂದು ಬದಲಾವಣೆ ತಂದುಕೊಳ್ಳುವುದು ಅನಿವಾರ್ಯ. ಚಳಿಗಾಲದಲ್ಲಿ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬುದನ್ನು ನಾವು ಹೇಳ್ತೇವೆ ಕೇಳಿ.
ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡುವ ಹವ್ಯಾಸ ನಿಮಗಿದ್ದರೆ ಚಳಿಗಾಲದಲ್ಲಿ ಸ್ವಲ್ಪ ತಡವಾಗಿ ಈ ವ್ಯಾಯಾಮಗಳನ್ನು ಮಾಡಿ. ಸೂರ್ಯ ಉದಯಿಸಿದ ನಂತರ ವ್ಯಾಯಾಮ ಮಾಡುವುದು ಒಳ್ಳೆಯದು. ಇದಕ್ಕಿಂತ ಮೊದಲು ವ್ಯಾಯಾಮ ಮಾಡುವುದರಿಂದ ನೆಗಡಿಯಾಗುವ ಸಾಧ್ಯತೆ ಇರುತ್ತದೆ.
ಎಲ್ಲೆಂದರಲ್ಲಿ ನೀರು ಕುಡಿಯಬೇಡಿ. ಈ ಚಾಳಿ ನಿಮಗಿದ್ದರೆ ಇಂದೇ ನಿಲ್ಲಿಸಿಬಿಡಿ. ಕುದಿಸಿ, ಆರಿಸಿದ ನೀರನ್ನೇ ಕುಡಿಯುವುದು ಬಹಳ ಮುಖ್ಯ.
ಕೀಲು ನೋವಿನಿಂದ ತಪ್ಪಿಸಿಕೊಳ್ಳಬೇಕಾದರೆ ಮನೆಯಿಂದ ಹೊರ ಹೋಗುವಾಗ ಬೆಚ್ಚಗಿನ ಬಟ್ಟೆಯನ್ನು ಧರಿಸಿ. ನೀವು ಹಾಗೂ ನಿಮ್ಮ ಮಕ್ಕಳ ಬಟ್ಟೆಯ ಬಗ್ಗೆ ಗಮನವಿರಲಿ. ಕಿವಿ ಹಾಗೂ ಎದೆಯ ಭಾಗಗಳು ಬೆಚ್ಚಗಿರುವಂತೆ ನೋಡಿಕೊಳ್ಳಿ.
ಚಳಿಗಾಲದಲ್ಲಿ ಸನ್ ಬಾತ್ ಮಾಡುವುದು ಒಳ್ಳೆಯದು. ಸೂರ್ಯನ ಶಾಖಕ್ಕೆ ಮೈ ಒಡ್ಡುವುದರಿಂದ ಹಿತವೆನಿಸುತ್ತದೆ. ಸ್ಟೀಮ್ ಬಾತ್ ಕೂಡ ಒಳ್ಳೆಯದು. ಇದರಿಂದ ಅನೇಕ ಅನುಕೂಲಗಳಿವೆ.
ಮೊದಲು ಹೇಳಿದಂತೆ ಕೆಲವೊಂದು ರೂಢಿಗಳನ್ನು ಚಳಿಗಾಲದಲ್ಲಿ ಬಿಡಬೇಕು. ತಡವಾಗಿ ಮಲಗುವುದು ಅದರಲ್ಲೊಂದು. ಚಳಿಗಾಲದಲ್ಲಿ ಆದಷ್ಟು ಬೇಗ ಮಲಗುವುದು ಉತ್ತಮ.
ಆಹಾರದಲ್ಲಿಯೂ ಬದಲಾವಣೆ ಬೇಕು. ಮಸಾಲೆಯುಕ್ತ ಆಹಾರದಿಂದ ದೂರ ಇರಿ. ತಣ್ಣನೆಯ ಹಾಗೂ ಹಸಿ ಆಹಾರವನ್ನು ಆದಷ್ಟು ಕಡಿಮೆ ಮಾಡಿ. ಬೇಯಿಸಿದ ಆಹಾರಗಳನ್ನು ಹೆಚ್ಚಾಗಿ ಸೇವಿಸಿ. ತುಂಬಾ ಮದ್ಯ ಕುಡಿಯುವುದು ಒಳ್ಳೆಯದಲ್ಲ.