ಮೊಬೈಲ್ನಲ್ಲಿ ಮಾತನಾಡುವಾಗ ಕರೆ ಸರಿಯಾಗಿ ಕನೆಕ್ಟ್ ಆಗುತ್ತಿಲ್ಲವೇ? ಕೆಲವೊಮ್ಮೆ ಧ್ವನಿ ಸ್ಪಷ್ಟವಾಗಿ ಕೇಳಿಸುವುದಿಲ್ಲವೇ? ಇಂತಹ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಮಹತ್ವದ ಹೆಜ್ಜೆ ಇಟ್ಟಿದೆ. ಟೆಲಿಕಾಂ ಕ್ಷೇತ್ರದಲ್ಲಿ ತಾಂತ್ರಿಕ ಬದಲಾವಣೆ ತರುವ ಉದ್ದೇಶದಿಂದ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಇದು ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಸೇರಿದಂತೆ ಪ್ರಮುಖ ಟೆಲಿಕಾಂ ಕಂಪನಿಗಳಿಗೆ ಅನ್ವಯವಾಗಲಿದೆ.
ಹೊಸ ನಿಯಮಗಳು 2027ರ ಜನವರಿ 1ರಿಂದ ಜಾರಿಗೆ ಬರಲಿವೆ. ಇದರಿಂದ ಮೊಬೈಲ್ ಕರೆಗಳ ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಿಸುವುದರ ಜೊತೆಗೆ ನೆಟ್ವರ್ಕ್ ಕಾರ್ಯಕ್ಷಮತೆ ಹೆಚ್ಚುವ ನಿರೀಕ್ಷೆಯಿದೆ. ಹಾಗಾದರೆ TRAI ತಂದಿರುವ ಹೊಸ ಬದಲಾವಣೆಗಳೇನು? ಮೊಬೈಲ್ ಬಳಕೆದಾರರಿಗೆ ಇದರಿಂದ ಯಾವ ರೀತಿಯ ಅನುಕೂಲವಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಕರೆಗಳು ಕನೆಕ್ಟ್ ಆಗಲು ಇನ್ಮುಂದೆ ಹೆಚ್ಚು ಸಮಯ ಕಾಯಬೇಕಿಲ್ಲ!
ಒಂದು ಟೆಲಿಕಾಂ ನೆಟ್ವರ್ಕ್ನಿಂದ ಮತ್ತೊಂದು ನೆಟ್ವರ್ಕ್ಗೆ ಕರೆ ಸಂಪರ್ಕಿಸುವ ವ್ಯವಸ್ಥೆಯಲ್ಲಿ TRAI ಮಹತ್ವದ ಬದಲಾವಣೆ ಮಾಡಿದೆ. ಪ್ರಸ್ತುತ SDCA ಮತ್ತು LDCA ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಟರ್ಕನೆಕ್ಷನ್ ಪಾಯಿಂಟ್ಗಳನ್ನು (PoI) ಇನ್ಮುಂದೆ LSA ಮಟ್ಟಕ್ಕೆ ಬದಲಾಯಿಸಲು ನಿರ್ಧರಿಸಲಾಗಿದೆ.
ಈ ಬದಲಾವಣೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಹಂತ ಹಂತವಾಗಿ ಜಾರಿಗೊಳಿಸಲು ಟೆಲಿಕಾಂ ಕಂಪನಿಗಳಿಗೆ ಸೂಚಿಸಲಾಗಿದೆ.
ಇದರಿಂದ ಒಂದು ನೆಟ್ವರ್ಕ್ನಿಂದ ಮತ್ತೊಂದು ನೆಟ್ವರ್ಕ್ಗೆ ಕರೆ ಸಂಪರ್ಕಿಸುವ ಪ್ರಕ್ರಿಯೆ ಸರಳವಾಗಲಿದೆ. ಕರೆ ಕನೆಕ್ಟ್ ಆಗಲು ತೆಗೆದುಕೊಳ್ಳುವ ಸಮಯ ಕಡಿಮೆಯಾಗುವ ಜೊತೆಗೆ ಗ್ರಾಹಕರಿಗೆ ಹೆಚ್ಚು ವಿಶ್ವಾಸಾರ್ಹ ಸೇವೆ ಸಿಗುವ ನಿರೀಕ್ಷೆಯಿದೆ.
ಹಳೆಯ ಟೆಕ್ನಾಲಜಿಗೆ ಗುಡ್ಬೈ; ಹೊಸ IP ವ್ಯವಸ್ಥೆ ಜಾರಿ!
TRAIನ ಮತ್ತೊಂದು ಪ್ರಮುಖ ನಿರ್ಧಾರವೆಂದರೆ ಹಳೆಯ E1/TDM ತಂತ್ರಜ್ಞಾನವನ್ನು ಹಂತಹಂತವಾಗಿ ಸ್ಥಗಿತಗೊಳಿಸುವುದು. ಇದರ ಬದಲಿಗೆ ಆಧುನಿಕ IP (Internet Protocol) ಆಧಾರಿತ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ.
ಹೊಸದಾಗಿ ನಿರ್ಮಿಸುವ ಪ್ರತಿಯೊಂದು ಇಂಟರ್ಕನೆಕ್ಷನ್ ಪಾಯಿಂಟ್ ಕೂಡ ಕಡ್ಡಾಯವಾಗಿ IP ತಂತ್ರಜ್ಞಾನವನ್ನು ಹೊಂದಿರಬೇಕು. ಈಗಾಗಲೇ ಬಳಕೆಯಲ್ಲಿರುವ ಹಳೆಯ ವ್ಯವಸ್ಥೆಗಳನ್ನೂ ಮುಂದಿನ ಮೂರು ವರ್ಷಗಳಲ್ಲಿ ಸಂಪೂರ್ಣವಾಗಿ ಹೊಸ ತಂತ್ರಜ್ಞಾನಕ್ಕೆ ಬದಲಾಯಿಸಬೇಕಿದೆ.
ಇದರಿಂದ ನೆಟ್ವರ್ಕ್ ಸಾಮರ್ಥ್ಯ ಹೆಚ್ಚುವುದರ ಜೊತೆಗೆ ಬ್ಯಾಂಡ್ವಿಡ್ತ್ ಬಳಕೆ ಸುಧಾರಿಸಲಿದೆ. ಮುಖ್ಯವಾಗಿ ಧ್ವನಿ ಕರೆಗಳ ಗುಣಮಟ್ಟ ಮತ್ತು ಸ್ಪಷ್ಟತೆ ಹೆಚ್ಚುವ ನಿರೀಕ್ಷೆಯಿದೆ.
ಟೆಲಿಕಾಂ ಕಂಪನಿಗಳಿಗೆ ಹೊಸ ಅವಕಾಶ
ಹೊಸ ಮಾರ್ಗಸೂಚಿಗಳ ಪ್ರಕಾರ, ಟೆಲಿಕಾಂ ಕಂಪನಿಗಳು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಇಂಟರ್ಕನೆಕ್ಷನ್ ಪಾಯಿಂಟ್ಗಳನ್ನು ಸ್ವಯಂಪ್ರೇರಣೆಯಿಂದ ಹಿಂತಿರುಗಿಸುವ (Surrender) ಅವಕಾಶವನ್ನೂ ಪಡೆಯಲಿವೆ.
ಹಿಂದೆ ನೆಟ್ವರ್ಕ್ ಸಂಪರ್ಕ ಕಡಿತಗೊಳಿಸುವ ನಿಯಮ ಮಾತ್ರ ಇದ್ದು, ಇದೀಗ ಈ ಹೊಸ ಅವಕಾಶವನ್ನೂ ಕಲ್ಪಿಸಲಾಗಿದೆ.
ಪಾವತಿ ವಿಳಂಬವಾದರೆ ಹೆಚ್ಚುವರಿ ಬಡ್ಡಿ!
ಇಂಟರ್ಕನೆಕ್ಷನ್ ಶುಲ್ಕ ಪಾವತಿಯಲ್ಲಿ ವಿಳಂಬ ಮಾಡುವ ಟೆಲಿಕಾಂ ಕಂಪನಿಗಳಿಗೆ ಸಂಬಂಧಿಸಿದಂತೆ TRAI ಹೊಸ ಬಡ್ಡಿ ನಿಯಮವನ್ನೂ ಪರಿಚಯಿಸಿದೆ.
-
ಬಡ್ಡಿ ದರ: ಪಾವತಿ ವಿಳಂಬವಾದರೆ ಎಸ್ಬಿಐನ ಒಂದು ವರ್ಷದ MCLR ದರದ ಜೊತೆಗೆ ಹೆಚ್ಚುವರಿಯಾಗಿ ಶೇ.2ರಷ್ಟು ಬಡ್ಡಿ ವಿಧಿಸಲು ಅವಕಾಶ ನೀಡಲಾಗಿದೆ.
-
ಬ್ಯಾಂಕ್ ಗ್ಯಾರಂಟಿ: ಟೆಲಿಕಾಂ ಕಂಪನಿಗಳ ಬ್ಯಾಂಕ್ ಗ್ಯಾರಂಟಿ ಅವಧಿಯನ್ನು 6 ತಿಂಗಳಿಂದ 12 ತಿಂಗಳಿಗೆ ವಿಸ್ತರಿಸಲಾಗಿದೆ.
-
ನಿಯಮ ಉಲ್ಲಂಘನೆಗೆ ದಂಡ: ಹೊಸ ನಿಯಮಗಳನ್ನು ಪಾಲಿಸದ ಕಂಪನಿಗಳ ಮೇಲೆ ನಿಗಾ ಇಡಲು ವಿಶೇಷ ವ್ಯವಸ್ಥೆ ರೂಪಿಸಲಾಗುತ್ತದೆ. ಉಲ್ಲಂಘನೆ ಕಂಡುಬಂದರೆ ಹಂತ ಹಂತವಾಗಿ ಆರ್ಥಿಕ ದಂಡ ವಿಧಿಸಲಾಗುತ್ತದೆ.
ಮೊಬೈಲ್ ಗ್ರಾಹಕರಿಗೆ ನಿಜವಾಗಿಯೂ ಏನು ಲಾಭ?
TRAIನ ಹೊಸ ನಿಯಮಗಳ ಮುಖ್ಯ ಉದ್ದೇಶ ಟೆಲಿಕಾಂ ನೆಟ್ವರ್ಕ್ಗಳನ್ನು ಆಧುನೀಕರಿಸುವುದಾಗಿದೆ. ಇದರಿಂದ ಗ್ರಾಹಕರಿಗೆ ಈ ಕೆಳಗಿನ ಅನುಕೂಲಗಳು ಸಿಗುವ ನಿರೀಕ್ಷೆಯಿದೆ.
-
ಕರೆ ಸಂಪರ್ಕಗೊಳ್ಳುವ ಸಮಯ ಕಡಿಮೆಯಾಗಬಹುದು.
-
ಧ್ವನಿ ಕರೆಗಳ ಸ್ಪಷ್ಟತೆ ಸುಧಾರಿಸಬಹುದು.
-
ನೆಟ್ವರ್ಕ್ಗಳ ನಡುವಿನ ಕರೆ ಸಂಪರ್ಕ ವ್ಯವಸ್ಥೆ ಸುಗಮವಾಗಬಹುದು.
-
ಆಧುನಿಕ ತಂತ್ರಜ್ಞಾನದಿಂದ ಟೆಲಿಕಾಂ ಸೇವೆಗಳ ವಿಶ್ವಾಸಾರ್ಹತೆ ಹೆಚ್ಚಬಹುದು.
ಯಾವಾಗಿನಿಂದ ಹೊಸ ನಿಯಮ ಜಾರಿ?
TRAI ಪ್ರಕಟಿಸಿರುವ ‘ಟೆಲಿಕಮ್ಯುನಿಕೇಷನ್ ಇಂಟರ್ಕನೆಕ್ಷನ್ (ಮೂರನೇ ತಿದ್ದುಪಡಿ) ನಿಯಮಗಳು-2026’ 2027ರ ಜನವರಿ 1ರಿಂದ ಜಾರಿಗೆ ಬರಲಿವೆ. ಹಳೆಯ ಇಂಟರ್ಕನೆಕ್ಷನ್ ವ್ಯವಸ್ಥೆಯಿಂದ ಹೊಸ IP ಆಧಾರಿತ ತಂತ್ರಜ್ಞಾನಕ್ಕೆ ಬದಲಾಗಲು ಟೆಲಿಕಾಂ ಕಂಪನಿಗಳಿಗೆ ಮೂರು ವರ್ಷಗಳ ಕಾಲಾವಕಾಶ ನೀಡಲಾಗಿದೆ.
ಒಟ್ಟಿನಲ್ಲಿ, ಮೊಬೈಲ್ ಬಳಕೆದಾರರ ಕರೆ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುವ ಉದ್ದೇಶದಿಂದ TRAI ಈ ಮಹತ್ವದ ಬದಲಾವಣೆಗಳನ್ನು ತಂದಿದೆ. ಆದರೆ ಈ ನಿಯಮಗಳಿಂದ ಗ್ರಾಹಕರ ರೀಚಾರ್ಜ್ ದರಗಳಲ್ಲಿ ತಕ್ಷಣದ ಬದಲಾವಣೆ ಆಗಲಿದೆ ಎಂಬ ಘೋಷಣೆ ಇಲ್ಲ. ಹೊಸ ತಂತ್ರಜ್ಞಾನ ಸಂಪೂರ್ಣವಾಗಿ ಜಾರಿಯಾದ ಬಳಿಕ ಟೆಲಿಕಾಂ ಸೇವೆಗಳ ಗುಣಮಟ್ಟದಲ್ಲಿ ಯಾವ ರೀತಿಯ ಸುಧಾರಣೆ ಕಂಡುಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

