ಉತ್ತರಾಖಂಡ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಪತನ 5 ಮಂದಿ ಕನ್ನಡಿಗರು ಸೇರಿ 6 ಜನರು ಮೃತಪಟ್ಟಿದ್ದ ಘಟನೆ ಸಂಬಂಧ ವಿಮಾನ ಅಪಘಾತ ತನಿಖಾ ಸಂಸ್ಥೆಯಿಂದ (Aircraft Accident Investigation Bureau) ತನಿಖೆ ಆರಂಭಿಸಿದೆ.
ಹೆಲಿಕಾಪ್ಟರ್‌ನ ಬ್ಲ್ಯಾಕ್ಬಾಕ್ಸ್ ಮತ್ತು ಫ್ಲೈಟ್ ಡೇಟಾ ಪರಿಶೀಲನೆ ನಡೆಯುತ್ತಿದ್ದು, ಹೆಲಿಕಾಪ್ಟರ್ ನಿರ್ವಹಣೆ ಮತ್ತು ತಾಂತ್ರಿಕ ಸ್ಥಿತಿಯ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಹವಾಮಾನ ವೈಪರೀತ್ಯ, ತಾಂತ್ರಿಕ ದೋಷದ ಜೊತೆಗೆ DGCA ನಿಯಮ ಪಾಲನೆ ಬಗ್ಗೆಯೂ ಅಧಿಕಾರಿಗಳು ಪರೀಕ್ಷಿಸುತ್ತಿದ್ದಾರೆ. ಒಂದು ತಿಂಗಳೊಳಗೆ ಈ ಸಂಬಂಧ ಪ್ರಾಥಮಿಕ ತನಿಖಾ ವರದಿ ಬರುವ ನಿರೀಕ್ಷೆ ಇದೆ ಎನ್ನಲಾಗಿದೆ.
ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿರುವ ಆರು ಜನರ ಮೃತದೇಹಗಳನ್ನು ರಕ್ಷಣಾ ತಂಡ ಪತ್ತೆಹಚ್ಚಿದ್ದು, ಜೋಶಿಮಠದಲ್ಲಿ ಮರಣೋತ್ತರ ಪರೀಕ್ಷೆ ನಡೆಸುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೃತರ ಗುರುತು ಪತ್ತೆಗೆ ಕುಟುಂಬಸ್ಥರಿಂದ DNA ಮಾದರಿ ಸಂಗ್ರಹ ನಡೆಸಲಾಗ್ತಿದ್ದು, ಕರ್ನಾಟಕದ ಐವರು ಪ್ರಯಾಣಿಕರ ಮೃತದೇಹ ಶಿಫ್ಟ್ಗೆ ಸಿಎಂ ಸೂಚನೆ ಹಿನ್ನೆಲೆ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ನಡೆಯಲಿದೆ.
ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದವರು:
ಹಿಮಾಂಶು ಸಬರ್ವಾಲ್ (48)- ವಾಯುವ್ಯ ದೆಹಲಿ
ಪ್ರತಾಪ ಬಾಚಿಹಳ್ಳಿ ನಿಂಗರಾಜು (41)- ಬೆಂಗಳೂರು ಉತ್ತರ
ಅರುಣ್ ಸಾಳುಂಕೆ (44)- ಬೆಂಗಳೂರು
ಸುಧೀರ್ ಕೆ. (49)- ಬೆಂಗಳೂರು
ನಟರಾಜ್ (51)-ತುಮಕೂರು
ಶಂಕರ್ ಗೌಡ ವಿ.ಬಿ. (39)
ಹೆಲಿಕಾಪ್ಟರ್ ದುರಂತದಲ್ಲಿ ಬೆಂಗಳೂರು ಮೂಲದ ಐವರು ಸಾವನ್ನಪ್ಪಿದ್ದಾರೆ. ಸಿಸಿಬಿ ಇನ್ಸ್ ಪೆಕ್ಟರ್ ಅರುಣ್ ಸಾಲಂಕೆ ತಮ್ಮ ಸ್ನೇಹಿತರ ಜೊತೆಗೆ ಚಾರ್ ಧಾಮ್ ಯಾತ್ರೆಗೆ ತೆರಳಿದ್ದರು. ಬದರಿನಾಥ ದೇವರ ದರ್ಶನ ಪಡೆದು ಜೋಶಿಮಠದತ್ತ ಬರುತ್ತಿದ್ದಾಗ ಹೆಲಿಕಾಪ್ಟರ್ ಸಂಪರ್ಕ ಕಡಿತಗೊಂಡಿದೆ. ಬಳಿಕ ಕೆಲವೇ ಸಮಯದಲ್ಲಿ ವಿಮಾನ ಪತನಗೊಂಡಿದೆ.
ಟ್ರಾನ್ಸ್‌ಭಾರತ್ ಏವಿಯೇಷನ್ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಇದಾಗಿದ್ದು, ದುರಂತದ ಬಳಿಕ ಈ ಸಂಸ್ಥೆಗೆ ಸೆರಿದ ಎಲ್ಲಾ ವಿಮಾನ ಹಾರಾಟವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಹೆಲಿಕಾಪ್ಟರ್ ಬದರಿನಾಥ ಧಾಮದಿಂದ ವಾಪಸ್ ಬರುತ್ತಿದ್ದ ವೇಳೆ ಈ ದುರಂತ ಸಂಭವಿಸಿದ್ದು, ಚಾಯ್ ಮತ್ತು ಥಾಯಾಂಗ್ ಗ್ರಾಮಗಳ ಸಮೀಪ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿತ್ತು.
ಪ್ರತಿಕೂಲ ಹವಾಮಾನ ಮತ್ತು ಕಡಿಮೆ ಗೋಚರತೆ ಅಪಘಾತಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದಾಗ್ಯೂ ಅಪಘಾತಕ್ಕೆ ನಿಖರ ಕಾರಣ ಏನೆಂಬುದು ತನಿಖೆ ಬಳಿಕವೇ ತಿಳಿಯಲಿದೆ.

