ವೆನೆಜುವೆಲಾದಲ್ಲಿ ಬುಧವಾರ ಸಂಭವಿಸಿದ ಎರಡು ಪ್ರಬಲ ಭೂಕಂಪಗಳು ಭಾರೀ ಆತಂಕ ಸೃಷ್ಟಿಸಿವೆ. ಕೇವಲ 39 ಸೆಕೆಂಡ್ಗಳ ಅಂತರದಲ್ಲಿ 7.2 ಮತ್ತು 7.5 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿದ್ದು, ರಾಜಧಾನಿ ಕಾರಕಾಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆಗಳಲ್ಲಿ ದೊಡ್ಡ ಬಿರುಕುಗಳು ಮೂಡಿವೆ ಹಾಗೂ ಅನೇಕ ಕಟ್ಟಡಗಳು ಹಾನಿಗೊಳಗಾಗಿವೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ರಸ್ತೆಗಳು ಮಧ್ಯೆ ಚೀರಿಕೊಂಡಿರುವುದು, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಆತಂಕದಿಂದ ಹೊರಗೆ ಓಡುತ್ತಿರುವುದು ಹಾಗೂ ಕಾರಕಾಸ್ನ ಎತ್ತರದ ಕಟ್ಟಡದ ಮೇಲ್ಭಾಗದ ಈಜುಕೊಳದಿಂದ ನೀರು ಧುಮ್ಮಿಕ್ಕಿ ಹರಿಯುತ್ತಿರುವ ದೃಶ್ಯಗಳು ಕಂಡುಬಂದಿವೆ. ಅಮೆರಿಕದ ಭೂಗರ್ಭ ಸಮೀಕ್ಷಾ ಸಂಸ್ಥೆ (USGS) ಪ್ರಕಾರ, ಮೊದಲ ಭೂಕಂಪವು ಸ್ಯಾನ್ ಫೆಲಿಪೆ ಸಮೀಪ 7.2 ತೀವ್ರತೆಯಲ್ಲಿ ಸಂಭವಿಸಿದ್ದು, ಅದರ 39 ಸೆಕೆಂಡ್ಗಳ ಬಳಿಕ ಯುಮಾರೆ ಪ್ರದೇಶದ ಬಳಿ 7.5 ತೀವ್ರತೆಯ ಮತ್ತೊಂದು ಭೂಕಂಪ ದಾಖಲಾಗಿದೆ. ಎರಡೂ ಕೇಂದ್ರಬಿಂದುಗಳು ಕಾರಕಾಸ್ನಿಂದ ಸುಮಾರು 280–290 ಕಿ.ಮೀ ದೂರದಲ್ಲಿದ್ದವು.
ಭೂಕಂಪದ ಪರಿಣಾಮ ಕಾರಕಾಸ್ನಲ್ಲಿ ಕೆಲವು ಕಟ್ಟಡಗಳು ಕುಸಿದಿದ್ದು, ಹಲವಾರು ಮನೆಗಳಿಗೆ ಹಾನಿಯಾಗಿದೆ ಎಂದು ವೆನೆಜುವೆಲಾದ ಆಂತರಿಕ ಸಚಿವ ಡಿಯೊಸ್ಡಾಡೊ ಕಬೆಲ್ಲೊ ತಿಳಿಸಿದ್ದಾರೆ. ಸಾವುನೋವುಗಳ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ USGS ಪ್ರಾಥಮಿಕ ಅಂದಾಜಿನ ಪ್ರಕಾರ, ಭಾರೀ ಜೀವಹಾನಿ ಮತ್ತು ವ್ಯಾಪಕ ಹಾನಿಯ ಸಾಧ್ಯತೆ ಇದೆ.
ಭೂಕಂಪದ ಸಮಯದಲ್ಲಿ ಮನೆಗಳಲ್ಲಿದ್ದ ವಸ್ತುಗಳು ಕೆಳಗೆ ಬಿದ್ದಿದ್ದು, ಗೋಡೆಗಳಲ್ಲಿ ಬಿರುಕುಗಳು ಮೂಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಕ್ಷಣಾ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳಗಳು ತುರ್ತು ಕಾರ್ಯಾಚರಣೆಯಲ್ಲಿ ತೊಡಗಿದ್ದು, ಹಾನಿಯ ಮೌಲ್ಯಮಾಪನ ಮುಂದುವರಿದಿದೆ. ಅಧಿಕಾರಿಗಳು ಇನ್ನಷ್ಟು ನಂತರದ ಕಂಪನಗಳ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

