ರಿಯಾಲಿಟಿ ಶೋ ಪ್ರಿಯರ ನೆಚ್ಚಿನ ವೇದಿಕೆಯಾಗಿದ್ದ ‘ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್’ ಸೀಸನ್ 5ರ ಕಿರೀಟವನ್ನು ರಾಯ್‌ಪುರದ ಪ್ರತಿಭಾವಂತ ನರ್ತಕ ರಿತೇಶ್ ಪಾಲ್ ತಮ್ಮದಾಗಿಸಿಕೊಂಡಿದ್ದಾರೆ. ಕಠಿಣ ಸ್ಪರ್ಧೆ ಮತ್ತು ರೋಮಾಂಚಕ ನೃತ್ಯ ಪ್ರದರ್ಶನಗಳಿಂದ ಕೂಡಿದ್ದ ಈ ಸೀಸನ್‌ನಲ್ಲಿ ಕೊನೆಗೂ ರಿತೇಶ್ ತಮ್ಮ ನೃತ್ಯ ಕೊರಿಯೋಗ್ರಾಫರ್ ಪ್ರತೀಕ್ ಉಟೇಕರ್ ಅವರೊಂದಿಗೆ ವಿನ್ನರ್ ಟ್ರೋಫಿ ಎತ್ತಿಹಿಡಿದರು.
ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನ ಈ ಜನಪ್ರಿಯ ನೃತ್ಯ ಶೋನಲ್ಲಿ ‘ಇಂಡಿಯಾ ವಾಲಾ ಡ್ಯಾನ್ಸ್’ ಎಂಬ ವಿನೂತನ ಥೀಮ್ ಇಡಲಾಗಿತ್ತು. ಇದು ಸ್ಪರ್ಧಿಗಳಿಗೆ ಹಲವು ವಿಭಿನ್ನ ಶೈಲಿಯ ನೃತ್ಯ ಪ್ರಕಾರಗಳನ್ನು ಪ್ರಯೋಗಿಸಲು ಸೂಕ್ತ ವೇದಿಕೆಯಾಯಿತು. ಗ್ರ್ಯಾಂಡ್ ಫಿನಾಲೆಯಲ್ಲಿ ದೀಪಾಲಿ ಬೋರ್ಕರ್, ಪ್ರಥಮೇಶ್ ಮಾನೆ, ಅನ್ಶಿಕಾ ಧಾರಾ ಹಾಗೂ ಗೀತಾಂಜಲಿ ಮರ್ವಾಹಾ ಅವರಂತಹ ಬಲಿಷ್ಠ ಸ್ಪರ್ಧಿಗಳಿಗೆ ತೀವ್ರ ಪೈಪೋಟಿ ನೀಡಿದ ರಿತೇಶ್ ಅಂತಿಮವಾಗಿ ವಿಜೇತರಾಗಿ ಹೊರಹೊಮ್ಮಿದರು.
ಇಡೀ ಸೀಸನ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದ ರಿತೇಶ್, ಹೊಸ ಶೈಲಿಗಳನ್ನು ಕಲಿಯಲು ತೋರಿದ ಉತ್ಸಾಹ ಎಲ್ಲರ ಗಮನ ಸೆಳೆದಿತ್ತು. ಶೋ ಮಧ್ಯೆ ಮೂರು ಬಾರಿ ‘ಬ್ಯಾಟಲ್ ಟ್ರೋಫಿ’ ಗೆಲ್ಲುವ ಮೂಲಕವೇ ತಾವು ಶ್ರೇಷ್ಠ ಸ್ಪರ್ಧಿ ಎಂಬುದನ್ನು ಅವರು ಸಾಬೀತುಪಡಿಸಿದ್ದರು. ಫಿನಾಲೆ ಪಂದ್ಯದಲ್ಲೂ ತಮ್ಮ ಗುರು ಪ್ರತೀಕ್ ಜತೆಗೂಡಿ ನೀಡಿದ ಅದ್ಭುತ ಪ್ರದರ್ಶನ ಅವರಿಗೆ ಪ್ರಶಸ್ತಿ ತಂದುಕೊಟ್ಟಿತು.
ಫಿನಾಲೆ ಸಮಾರಂಭಕ್ಕೆ ತೀರ್ಪುಗಾರರಾದ ಕರಿಷ್ಮಾ ಕಪೂರ್, ಜಾವೇದ್ ಜಾಫ್ರಿ, ಗೀತಾ ಕಪೂರ್ ಮತ್ತು ಟೆರೆನ್ಸ್ ಲೂಯಿಸ್ ಅವರೊಂದಿಗೆ ವಿಶೇಷ ಅತಿಥಿಗಳಾಗಿ ಬಾಲಿವುಡ್ ನಟರಾದ ಜಾಕಿ ಶ್ರಾಫ್, ತಮನ್ನಾ ಭಾಟಿಯಾ ಮತ್ತು ಸಿಲ್ವರ್ ಸ್ಕ್ರೀನ್ ನಟ ಸಿಂಧಾರ್ಥ್ ಮಲ್ಹೋತ್ರಾ ಆಗಮಿಸಿ ಕಾರ್ಯಕ್ರಮದ ಶೋಭೆ ಹೆಚ್ಚಿಸಿದರು.
ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ರಿತೇಶ್ ಪಾಲ್, ‘ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ 5’ ಪ್ರಶಸ್ತಿ ಗೆದ್ದದ್ದು ನನ್ನ ಜೀವನದ ಬಹುದೊಡ್ಡ ಕನಸು ನನಸಾದ ಕ್ಷಣ. ಈ ವೇದಿಕೆ ನನ್ನನ್ನು ಒಬ್ಬ ನರ್ತಕನಾಗಿ ಮತ್ತಷ್ಟು ಪಕ್ವಗೊಳಿಸಿದೆ. ತೀರ್ಪುಗಾರರ ಮಾರ್ಗದರ್ಶನ ಹಾಗೂ ಕೊರಿಯೋಗ್ರಾಫರ್ ಪ್ರತೀಕ್ ಸರ್ ನನ್ನ ಮೇಲಿಟ್ಟ ನಂಬಿಕೆಯೇ ಈ ಯಶಸ್ಸಿಗೆ ಕಾರಣ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಕೊರಿಯೋಗ್ರಾಫರ್ ಪ್ರತೀಕ್ ಉಟೇಕರ್, ನನ್ನ ಶಿಷ್ಯ ರಿತೇಶ್ ಜತೆ ಈ ಪ್ರಶಸ್ತಿ ಗೆದ್ದದ್ದು ಅತ್ಯಂತ ಹೆಮ್ಮೆಯ ಸಂಗತಿ. ನಾವಿಬ್ಬರೂ ಕಾಂಟೆಂಪರರಿ ಶೈಲಿಯಿಂದ ಬಂದವರಾಗಿದ್ದರೂ, ಈ ಶೋನಲ್ಲಿ ಸಿಕ್ಕ ಸವಾಲುಗಳನ್ನು ಸ್ವೀಕರಿಸಿ ಹೊಸ ಪ್ರಯೋಗಗಳನ್ನು ಮಾಡಿದೆವು. ರಿತೇಶ್ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಸಂಭ್ರಮಿಸಿದರು.

