ಬಾಲಿವುಡ್‌ನ ಬೋಲ್ಡ್ ಮತ್ತು ಬ್ಯೂಟಿಫುಲ್ ನಟಿ ಮಲ್ಲಿಕಾ ಶೆರಾವತ್ ಸದ್ಯ ತಮ್ಮ ಫಿಟ್‌ನೆಸ್ ಹಾಗೂ ಸೌಂದರ್ಯದ ರಹಸ್ಯವನ್ನು ಬಿಚ್ಚಿಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ. 49ನೇ ವಯಸ್ಸಿನಲ್ಲೂ ತಮ್ಮ ಫಿಟ್ ಹಾಗೂ ಟೋನ್ಡ್ ಬಾಡಿಯಿಂದ ಯುವತಿಯರಿಗೂ ಪೈಪೋಟಿ ನೀಡುವ ಈ ನಟಿ, ತಾವು ಇಷ್ಟೊಂದು ಫಿಟ್ ಆಗಿರಲು ಯಾವುದೇ ಶಾರ್ಟ್‌ಕಟ್ ಬಳಸಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವರ್ಕೌಟ್ ವಿಡಿಯೋ ಹಂಚಿಕೊಂಡಿರುವ ಮಲ್ಲಿಕಾ ಶೆರಾವತ್, ಫಿಟ್‌ನೆಸ್‌ಗೆ ವಯಸ್ಸು ಮುಖ್ಯವಲ್ಲ, ನಾವು ಪ್ರತಿದಿನ ಮಾಡುವ ಪ್ರಯತ್ನ ಮುಖ್ಯ ಎಂದು ಬರೆದುಕೊಂಡಿದ್ದಾರೆ. “ವಯಸ್ಸು ಫಿಟ್‌ನೆಸ್ ಅನ್ನು ನಿರ್ಧರಿಸುವುದಿಲ್ಲ, ನಾವು ಕಾಪಾಡಿಕೊಳ್ಳುವ ನಿರಂತರತೆ ನಿರ್ಧರಿಸುತ್ತದೆ. ನಿಮ್ಮ ದೇಹವನ್ನು ನೀವು ಚೆನ್ನಾಗಿ ನೋಡಿಕೊಂಡರೆ, ಅದು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ. ಯಾವುದೇ ಕಠಿಣ ನಿಯಮಗಳಿಲ್ಲದೆ ಪ್ರತಿದಿನ ಸ್ವಲ್ಪ ಸಮಯ ದೇಹಕ್ಕೆ ದಂಡನೆ ನೀಡಬೇಕು. ಯೋಗ ನನ್ನ ಜೀವನದ ಪ್ರಮುಖ ಭಾಗವಾಗಿದ್ದು, ಪ್ರತಿದಿನ ಬೆಳಿಗ್ಗೆ ಲಘು ಯೋಗಾಸನಗಳೊಂದಿಗೆ ನನ್ನ ದಿನವನ್ನು ಆರಂಭಿಸುತ್ತೇನೆ” ಎಂದು ತಿಳಿಸಿದ್ದಾರೆ.
ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಮತ್ತೊಂದು ಪೋಸ್ಟ್ ಹಂಚಿಕೊಂಡಿರುವ ನಟಿ, “ಇದು ಅದೃಷ್ಟದಿಂದ ಬಂದಿದ್ದಲ್ಲ ಅಥವಾ ಯಾವುದೇ ಶಾರ್ಟ್‌ಕಟ್ ಇಲ್ಲ. ಜಿಮ್‌ಗೆ ಹೋಗಲು ಮನಸ್ಸಿಲ್ಲದ ದಿನಗಳಲ್ಲೂ ನಾನು ದಿನದಿಂದ ದಿನಕ್ಕೆ, ಪ್ರತಿ ಕ್ಷಣ ಶ್ರಮಪಟ್ಟು ಈ ದೇಹವನ್ನು ರೂಪಿಸಿದ್ದೇನೆ. ನೀವು ಯಾವಾಗ ಬೇಕಾದರೂ ಫಿಟ್‌ನೆಸ್ ಜರ್ನಿ ಆರಂಭಿಸಬಹುದು, ನಿಮ್ಮ ಮನಸ್ಸು ದೃಢವಾಗಿದ್ದರೆ ದೇಹ ಅದಕ್ಕೆ ತಕ್ಕಂತೆ ಸ್ಪಂದಿಸುತ್ತದೆ” ಎಂದು ಅಭಿಮಾನಿಗಳಿಗೆ ಸ್ಫೂರ್ತಿ ತುಂಬಿದ್ದಾರೆ.
ಮಲ್ಲಿಕಾ ಶೆರಾವತ್ ಅವರ ಡಯಟ್ ರಹಸ್ಯ
ತಮ್ಮ ಫಿಟ್‌ನೆಸ್ ಮತ್ತು ಹೊಳೆಯುವ ಚರ್ಮದ ರಹಸ್ಯ ಕೇವಲ ಯೋಗ ಮಾತ್ರವಲ್ಲ, ತಾವು ಅನುಸರಿಸುವ ಕಟ್ಟುನಿಟ್ಟಾದ ಸಸ್ಯಾಹಾರಿ (ವೇಗನ್) ಜೀವನಶೈಲಿ ಕೂಡ ಕಾರಣ ಎಂದು ಮಲ್ಲಿಕಾ ಈ ಹಿಂದೆ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ಅವರು ಪ್ರಾಣಿಜನ್ಯ ಮತ್ತು ಡೈರಿ ಉತ್ಪನ್ನಗಳಿಂದ ಸಂಪೂರ್ಣವಾಗಿ ದೂರವಿದ್ದಾರೆ. ಹಾಲು, ಲಸ್ಸಿ, ಪನೀರ್ ಹಾಗೂ ಚೀಸ್ ಅನ್ನು ಅವರು ಮುಟ್ಟುವುದೂ ಇಲ್ಲವಂತೆ.
ತಮ್ಮ ಆಹಾರ ಪದ್ಧತಿಯ ಬಗ್ಗೆ ಮಾತನಾಡಿರುವ ನಟಿ, ಬೆಳಗಿನ ಉಪಹಾರಕ್ಕೆ ಹೆಚ್ಚಾಗಿ ತಾಜಾ ಹಣ್ಣುಗಳನ್ನು ಸೇವಿಸುತ್ತಾರೆ. ಅದರಲ್ಲೂ ಮಾವಿನ ಹಣ್ಣು ಎಂದರೆ ಅವರಿಗೆ ಪಂಚಪ್ರಾಣ. ಇನ್ನು ಸಿಹಿ ತಿನ್ನಬೇಕು ಎನಿಸಿದರೆ ಕೇವಲ ಖರ್ಜೂರವನ್ನು ಮಾತ್ರ ತಿನ್ನುತ್ತಾರೆ. ಮಧ್ಯಾಹ್ನ ಮತ್ತು ರಾತ್ರಿಯ ಊಟದಲ್ಲಿ ಹಸಿರು ತರಕಾರಿ ಸಲಾಡ್, ಆವಕಾಡೊ ಹಾಗೂ ಬೆಂಡೆಕಾಯಿ ಪಲ್ಯ ಇವರ ಆಹಾರದಲ್ಲಿ ನಿಯಮಿತವಾಗಿ ಇರುತ್ತದೆ. ತೆಂಗಿನ ಹಾಲಿನಿಂದ ತಯಾರಿಸುವ ಥಾಯ್ ಗ್ರೀನ್ ಕರಿ ಎಂದರೆ ಮಲ್ಲಿಕಾಗೆ ಅಚ್ಚುಮೆಚ್ಚು ಎನ್ನಲಾಗಿದೆ.

