ಬೆಂಗಳೂರು: ಕರ್ನಾಟಕ ರಾಜಕಾರಣದ ಇತಿಹಾಸದಲ್ಲೇ ಅತ್ಯಂತ ಭಾವುಕ ಕ್ಷಣಗಳಿಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿ ಸಾಕ್ಷಿಯಾಗಿದೆ. ಹೈಕಮಾಂಡ್ ಸೂಚನೆಯಂತೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸುತ್ತಿದ್ದಂತೆ, ಅಲ್ಲಿ ನೆರೆದಿದ್ದ ಇಡೀ ಸಚಿವ ಸಂಪುಟವೇ ಒಂದು ಕ್ಷಣ ಸ್ತಬ್ಧವಾಗಿತ್ತು
ಬ್ರೇಕ್ಫಾಸ್ಟ್ ಮೀಟಿಂಗ್ ಮುಗಿಸಿ ಹೊರಬಂದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸಭೆಯ ಒಳಗಡೆ ನಡೆದ ಭಾವುಕ ಹೈ-ಡ್ರಾಮಾ ಹಾಗೂ ಸಿದ್ದರಾಮಯ್ಯ ಅವರ ರಾಜೀನಾಮೆ ನಿರ್ಧಾರ ಕೇಳಿ ನೂತನ ಸಿಎಂ ರೇಸ್ನಲ್ಲಿರುವ ಡಿ.ಕೆ. ಶಿವಕುಮಾರ್ ಅವರು ನೀಡಿದ ರಿಯಾಕ್ಷನ್ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಸಿದ್ದರಾಮಯ್ಯ ನಿರ್ಧಾರಕ್ಕೆ ಡಿಕೆಶಿ ರಿಯಾಕ್ಷನ್ ಹೇಗಿತ್ತು? ತಿಮ್ಮಾಪುರ ಹೇಳಿದ್ದೇನು?
ಸೌಹಾರ್ದಯುತ ವಾತಾವರಣ: ಸಚಿವ ತಿಮ್ಮಾಪುರ ಅವರ ಪ್ರಕಾರ, ಸಭೆಯಲ್ಲಿ ಯಾವುದೇ ರೀತಿಯ ಅಸಮಾಧಾನ ಇರಲಿಲ್ಲ. ಹೈಕಮಾಂಡ್ ಸೂಚನೆಯನ್ನು ಗೌರವಿಸಿ ಅತ್ಯಂತ ಸೌಹಾರ್ದಯುತವಾಗಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆದಿದೆ.
ಡಿಕೆಶಿ ಭಾವುಕ – ಸಿದ್ದು ಆಲಿಂಗನ: ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ವಿಷಯವನ್ನು ಅಧಿಕೃತವಾಗಿ ಪ್ರಕಟಿಸುತ್ತಿದ್ದಂತೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಭಾವುಕರಾದರು. ಈ ವೇಳೆ ಸಿದ್ದರಾಮಯ್ಯ ಅವರು ಡಿಕೆಶಿ ಅವರನ್ನು ಆಪ್ತವಾಗಿ ತಬ್ಬಿಕೊಂಡು ಬೆನ್ನು ತಟ್ಟಿದರು.
ಸಿದ್ದರಾಮಯ್ಯ ಕಾಲಿಗೆ ಬಿದ್ದ ಡಿಕೆಶಿ: ಸಭೆಯ ಅತ್ಯಂತ ಮಹತ್ವದ ಕ್ಷಣವೆಂದರೆ, ಮುಂದಿನ ಮುಖ್ಯಮಂತ್ರಿಯಾಗಲಿರುವ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಇಬ್ಬರೂ ನಾಯಕರು ಪರಸ್ಪರ ಕೈಹಿಡಿದು, “ಒಗ್ಗಟ್ಟೇ ನಮ್ಮ ಶಕ್ತಿ, ಮುಂದಿನ 2 ವರ್ಷಗಳ ಕಾಲ ನಾವೆಲ್ಲರೂ ಒಟ್ಟಾಗಿ ಸರ್ಕಾರ ಮುನ್ನಡೆಸಬೇಕು” ಎಂದು ಸಚಿವರಿಗೆ ಧೈರ್ಯ ತುಂಬಿದ್ದಾರೆ.
ಕಣ್ಣೀರಿಟ್ಟ ಸಚಿವರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಿರುವುದನ್ನು ಕೇಳಿ ಸಂತೋಷ್ ಲಾಡ್ ಸೇರಿದಂತೆ ಹಲವು ಸಚಿವರು ಸಭೆಯಲ್ಲೇ ಕಣ್ಣೀರು ಹಾಕಿದರು ಎಂದು ಆರ್.ಬಿ. ತಿಮ್ಮಾಪುರ ವಿವರಿಸಿದ್ದಾರೆ.

