HomeKarnatakaವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಯುವ ಕಲಾವಿದ ಸ್ಥಳದಲ್ಲೇ ಸಾವು

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಯುವ ಕಲಾವಿದ ಸ್ಥಳದಲ್ಲೇ ಸಾವು

ಶಿವಮೊಗ್ಗ: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಯುವ ರಂಗ ಕಲಾವಿದ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊನ್ನಟ್ಟಿ ಹೊಸೂರು ಸಮೀಪ ನಡೆದಿದೆ.

ಹರ್ಷ(31) ಮೃತಪಟ್ಟ ಕಲಾವಿದ. ಭದ್ರಾವತಿ ತಾಲೂಕು ಗೋಣಿಬೀಡು ನಿವಾಸಿಯಾದ ಹರ್ಷ ಸಂಬಂಧಿಯೊಬ್ಬರನ್ನು ಭದ್ರಾವತಿಗೆ ಬಿಟ್ಟು ಬರಲು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಗಂಭೀರವಾಗಿ ಗಾಯಗೊಂಡು ಹರ್ಷ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದೈಹಿಕ ಶಿಕ್ಷಕ, ಕಲಾವಿದ, ಹಾಡುಗಾರನಾಗಿ ಭವಿಷ್ಯ ಕಟ್ಟಿಕೊಳ್ಳಬೇಕಾಗಿದ್ದ ಯುವ ಪ್ರತಿಭೆ ಹರ್ಷ ಸಿ.ಎಂ.(31) ಅವರು ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಭದ್ರಾವತಿ ತಾಲೂಕು ಗೋಣಿಬೀಡಿನ ನಿವಾಸಿ ಮಂಜೇಗೌಡ ಮತ್ತು ಪ್ರೇಮ ಅವರ ಪುತ್ರನಾಗಿದ್ದು, ತಂದೆ, ತಾಯಿ, ಅಕ್ಕ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿ(ಬಿ.ಪಿ.ಇಡಿ, ಎಂ.ಪಿ.ಇಡಿ, ಪಿ.ಜಿ.ಡಿ.ವೈ-ಯೋಗ) ಕಾರ್ಯನಿರ್ವಹಿಸುತ್ತಿದ್ದ ಹರ್ಷ ಜಾನಪದ ಹಾಡುಗಾರಿಕೆ, ಆಂಗಿಕ ಅಭಿನಯ ಹೊಂದಿದ್ದರು. ರಾಷ್ಟ್ರೀಯ ಸೇವಾ ಯೋಜನೆ ತರಬೇತುದಾರನಾಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರವೃತ್ತಿಯಲ್ಲಿ ಹವ್ಯಾಸಿ ರಂಗ ಕಲಾವಿದರು, ಜಾನಪದ, ರಂಗಗೀತೆ ಗಾಯಕರು, ಯೋಗ ತರಬೇತುದಾರರು ಹಾಗೂ ಅಂತರರಾಷ್ಟ್ರೀಯ ಯೋಗಪಟು ಆಗಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಅತ್ಯುತ್ತಮ ಸ್ವಯಂ ಸೇವಕ ಪ್ರಶಸ್ತಿ, ಕುವೆಂಪು ವಿವಿ ನೀಡುವ ನಿರಂಕುಶಮತಿ ಪ್ರಶಸ್ತಿ, ಮಂಟೇಸ್ವಾಮಿ ಕಲಾ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದರು.

ಸಹೋದ್ಯೋಗಿಗಳಿಂದ ಸಂತಾಪ

ಹರ್ಷ ಸಿ.ಎಂ. ಅವರ ಅಕಾಲಿಕ ನಿಧನಕ್ಕೆ ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಹೋದ್ಯೋಗಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕ್ರೀಡಾ ಶಿಕ್ಷಕರಾಗಿ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸುವುದರ ಜೊತೆಗೆ ಕಲಾವಿದನಾಗಿ, ಜಾನಪದ ಗಾಯಕನಾಗಿ ಕಾಲೇಜಿನ ಎಲ್ಲಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದವರು. ಅವರ ನಗುಮುಖದ ಸೇವೆ, ಆತ್ಮೀಯತೆಯನ್ನು ಮರೆಯಲು ಸಾಧ್ಯವಿಲ್ಲ. ಹರ್ಷ ಅವರ ಹಾಡುಗಾರಿಕೆ ಕಣ್ಣ ಮುಂದೆ ಕಟ್ಟಿದಂತಿದೆ. ಇಷ್ಟು ಬೇಗ ಎಲ್ಲವನ್ನೂ ಬಿಟ್ಟು ಹೀಗೆ ಹೋಗಬಾರದಿತ್ತು ಎಂದು ಪ್ರಾಂಶುಪಾಲ ಪ್ರೊ. ಅವಿನಾಶ್, ಪ್ರಕಾಶ್ ಮರ್ಗನಳ್ಳಿ, ಲವ ಜಿ.ಆರ್., ಸಹ್ಯಾದ್ರಿ ಕಲಾ ತಂಡ ಕಲಾವಿದರು ಸೇರಿದಂತೆ ಅವರ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ.

ಗಾಂಜಾ ಮತ್ತಿನಲ್ಲಿ ಯುವಕರ ದುಷ್ಕೃತ್ಯ: 500 ರೂ.ಗಾಗಿ ಕೂಲಿ ಕಾರ್ಮಿಕನ ಕೊಲೆ

ಶಿವಮೊಗ್ಗ: ಗಾಂಜಾ ಸೇವನೆಯ ಮತ್ತಿನಲ್ಲಿ ಯುವಕರು ಕೂಲಿ ಕಾರ್ಮಿಕನನ್ನು ಕೊಲೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗದ ಅಶೋಕನಗರದ ತುಂಗಾ ಚಾನೆಲ್ ಬಳಿ ಕೇವಲ 500 ರೂ.ಗಾಗಿ ಮಹಮ್ಮದ್ ಅಲಿ ಎಂಬ ಕೂಲಿ ಕಾರ್ಮಿಕನನ್ನು ಹತ್ಯೆ ಮಾಡಲಾಗಿದೆ.

ಮಹಮ್ಮದ್ ಅಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಶನಿವಾರ ರಾತ್ರಿ ಗಾಂಜಾ ಮತ್ತಿನಲ್ಲಿದ್ದ ಯುವಕರು ಬೈಕ್ ನಲ್ಲಿ ಸ್ಥಳಕ್ಕೆ ಬಂದಿದ್ದಾರೆ. ಅಲಿ ಅವರ ಕೈಯಲ್ಲಿ 500 ರೂ. ನೋಡಿದ ಯುವಕರು ಹಣ ಕೊಡುವಂತೆ ಕೇಳಿದ್ದಾರೆ. ಆದರೆ ಕಾರ್ಮಿಕ ಅಲಿ ಹಣ ಕೊಡಲು ನಿರಾಕರಿಸಿದ್ದಾರೆ.

ಘಟನೆ ವೇಳೆ ಯುವಕರು ಗಾಂಜಾ ಸೇವನೆಯ ಮತ್ತಿನಲ್ಲಿದ್ದರು ಎನ್ನಲಾಗಿದ್ದು, 500 ರೂ. ಹಣದ ವಿಚಾರವಾಗಿ ಮಹಮ್ಮದ್ ಅಲಿ ಅವರೊಂದಿಗೆ ಜಗಳ ಮಾಡಿಕೊಂಡಿದ್ದಾರೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಯುವಕರು ಚಾಕುವಿನಿಂದ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಮಹಮ್ಮದ್ ಅಲಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆ ಹಾಗೂ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

500 ರೂ. ಹಣಕ್ಕಾಗಿ ನಡೆದ ಜಗಳವೊಂದು ಕೂಲಿ ಕಾರ್ಮಿಕನ ಜೀವವನ್ನೇ ಬಲಿ ಪಡೆದಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪ್ರಕರಣದ ಸಂಪೂರ್ಣ ಹಿನ್ನೆಲೆ, ಆರೋಪಿಗಳ ಸಂಖ್ಯೆ ಸೇರಿದಂತೆ ಹೆಚ್ಚಿನ ವಿವರಗಳನ್ನು ಪೊಲೀಸರ ತನಿಖೆಯ ಬಳಿಕ ಗೊತ್ತಾಗಲಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular