ತುಮಕೂರು: ದೇವರಾಯನ ದುರ್ಗದ ಬೆಟ್ಟದಿಂದ ಜಿಗಿದು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತುಮಕೂರು ತಾಲೂಕಿನ ದೇವರಾಯನದುರ್ಗದ ಬೆಟ್ಟದಲ್ಲಿ ಘಟನೆ ನಡೆದಿದೆ. ಪಾವಗಡ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಂಜು ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ.
ತುಮಕೂರಿನ ಸತ್ಯಮಂಗಲದಲ್ಲಿ ಮಂಜು ಪ್ರಸಾದ್ ವಾಸವಾಗಿದ್ದರು. ಒಂದೂವರೆ ವರ್ಷದ ಹಿಂದೆ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದ ಮಂಜು ಪ್ರಸಾದ್ ಈ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.
ಬೆಳಗ್ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದ ಮಂಜು ಪ್ರಸಾದ್ ಕೊರಟಗೆರೆಯಲ್ಲಿ ಸಂಬಂಧಿಯ ಕೈಗೆ ಮೊಬೈಲ್ ಮತ್ತು ಮನೆ ಕೀ ನೀಡಿದ್ದರು. ಮೀಟಿಂಗ್ ಇದೆ ಎಂದು ದೇವರಾಯನ ದುರ್ಗಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬದವರು ಅನುಮಾನಗೊಂಡು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಕ್ಯಾತ್ಸಂದ್ರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆತ್ಮಹತ್ಯೆ ತಡೆ ಸಹಾಯವಾಣಿ: ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669

