ಬೆಂಗಳೂರು: ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆ ಮಾಡಿ, ಅಡುಗೆ ಎಣ್ಣೆ, ರಸಗೊಬ್ಬರ ಬಳಕೆ ಮಿತಗೊಳಿಸಿ, ಚಿನ್ನ ಖರೀದಿ ನಿಲ್ಲಿಸುವಂತೆ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆ ವಿಚಾರ ರಾಷ್ಟ್ರಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ವಿಪಕ್ಷ ನಾಯಕರು ಪ್ರಧಾನಿ ಮೋದಿ ಹೇಳಿಕೆಯನ್ನು ಟೀಕಿಸಿದ್ದು, ಇದು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯವನ್ನು ಸೂಚಿಸುತ್ತಿದ್ದು, ಜನರ ಮೇಲೆ ಹೊರೆ ಹಾಕಿ ನುಣಿಚಿಕೊಳ್ಳುವ ಯತ್ನ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ನಡುವೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪ್ರಧಾನಿ ಮೋದಿ ಹೇಳಿಕೆಯನ್ನು ಸ್ವಾಗತಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ ಅವರ ಮಿತ ಬಳಕೆ ಮನವಿಯನ್ನು ಎಲ್ಲರೂ ಸ್ವಾಗತ ಮಾಡಬೇಕು ಎಂದು ಹೇಳಿದ್ದಾರೆ.
ತೆಲಂಗಾಣದಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ಕೆಲವು ಸಲಹೆ ಕೊಟ್ಟಿದ್ದಾರೆ. ದೇಶದ 150 ಕೋಟಿ ಜನರಿಗೆ ಮೋದಿ ಮನವಿ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಸಂಘರ್ಷದಿಂದ ದೇಶದ ಮೇಲೆ ಕೆಟ್ಟ ದುಷ್ಪರಿಣಾಮ ಬೀರುತ್ತಿದೆ. ಹಾಗಾಗಿ ಮೋದಿ ಅವರ ಮನವಿಯನ್ನ ಸ್ವಾಗತ ಮಾಡಬೇಕು ಎಂದು ತಿಳಿಸಿದ್ದಾರೆ.
ಅಮೆರಿಕಾ-ಇಸ್ರೇಲ್-ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಬಿಕ್ಕಟ್ಟು ಎದುರಾಗಿದೆ. ಹಾಗಾಗಿ ಇಂಧನ ಸೇರಿದಂತೆ ಎಲ್ಲವೂ ಮಿತ ವ್ಯಯ ಇರಲಿ ಎಂದು ಸಲಹೆ ನೀಡಿದ್ದಾರೆ. ಎಲ್ಲವನ್ನೂ ಮಿತವಾಗಿ ಹಾಗೂ ಎಚ್ಚರಿಕೆಯಿಂದ ಬಳಳಕೆ ಮಾಡಿ ಅಂತ ಹೇಳಿದ್ದಾರೆ ಎಂದು ಮೋದಿ ಹೇಳಿದರು.

