ವಿಜಯಪುರ : ಜಿಲ್ಲೆಯ ತಿಕೋಟಾ ತಾಲ್ಲೂಕಿನಾದ್ಯಂತ ಇಂದು ಬೆಳಿಗ್ಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಗ್ರಾಮಸ್ಥರು ಭೀತಿಯಿಂದ ಮನೆಯಿಂದ ಹೊರಗೆ ಓಡಿಬಂದಿದ್ದಾರೆ.
ಇಂದು ಬೆಳಗ್ಗೆ ಸುಮಾರು 8:21 ರ ವೇಳೆಗೆ ತಿಕೋಟಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ಈ ವೇಳೆ ದೊಡ್ಡ ಮಟ್ಟದ ಶಬ್ದ ಕೇಳಿಬಂದಿದ್ದು, ಮನೆಯಲ್ಲಿದ್ದ ಪಾತ್ರೆ ಪಗಡೆಗಳು ಉರುಳಿಬಿದ್ದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಭೂಕಂಪನದ ವ್ಯಾಪ್ತಿ:
- ವಿಜಯಪುರ ನಗರ, ತಿಕೋಟಾ ಪಟ್ಟಣ.
- ಕಳ್ಳಕವಟಗಿ, ಬಾಬಾನಗರ, ಬಿಜ್ಜರಗಿ, ಸೋಮದೇವರಹಟ್ಟಿ, ಮಲಕನದೇವರ ಹಟ್ಟಿ, ಹುಬನೂರ, ಟಕ್ಕಳಕಿ ಸೇರಿದಂತೆ ಹಲವು ಗ್ರಾಮಗಳು.
- ನೆರೆಯ ಮಹಾರಾಷ್ಟ್ರದ ಗಡಿ ಭಾಗದ ಗ್ರಾಮಗಳಾದ ಮೊಬರಗಿ ಮತ್ತು ತಿಕ್ಕುಂಡಿಯಲ್ಲೂ ಕಂಪನದ ಅನುಭವವಾಗಿದೆ.
ಬೆಚ್ಚಿಬಿದ್ದ ಗ್ರಾಮಸ್ಥರು: ವಿಜಯಪುರ ಜಿಲ್ಲೆಯ ತಿಕೋಟಾ ಸೇರಿದಂತೆ ನೆರೆಯ ಮಹಾರಾಷ್ಟ್ರದ ಗಡಿ ಭಾಗದ ಗ್ರಾಮಗಳಾದ ಮೊಬರಗಿ ಮತ್ತು ತಿಕ್ಕುಂಡಿಯಲ್ಲೂ ಭೂಕಂಪನದ ಅನುಭವವಾಗಿದೆ. ಬೆಳಿಗ್ಗೆಯೇ ಭೂಮಿ ಕಂಪಿಸಿದ್ದರಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಜೀವಭಯದಿಂದ ರಸ್ತೆಗೆ ಓಡಿಬಂದಿದ್ದಾರೆ.
ಕಳೆದ ಕೆಲವು ಸಮಯದಿಂದ ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆಗಾಗ್ಗೆ ಇಂತಹ ಲಘು ಭೂಕಂಪನಗಳು ಸಂಭವಿಸುತ್ತಲೇ ಇರುವುದು ಜಿಲ್ಲೆಯ ಜನತೆಯಲ್ಲಿ ಆತಂಕವನ್ನು ಹೆಚ್ಚಿಸಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ.
ಕಳೆದ ಕೆಲವು ತಿಂಗಳುಗಳಿಂದ ವಿಜಯಪುರ ಜಿಲ್ಲೆಯಲ್ಲಿ ಸರಣಿ ಭೂಕಂಪನಗಳು ಸಂಭವಿಸುತ್ತಲೇ ಇರುವುದು ಜಿಲ್ಲೆಯ ಜನರಲ್ಲಿ ನಿದ್ದೆಗೆಡಿಸಿದೆ. ಕೆಎಸ್ಎನ್ಎಂಡಿಸಿ (KSNDMC) ವರದಿಗಳ ಪ್ರಕಾರ, ಇವು ಲಘು ಭೂಕಂಪನಗಳಾಗಿದ್ದು ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಈ ಹಿಂದೆ ತಿಳಿಸಲಾಗಿತ್ತು. ಇಂದಿನ ಭೂಕಂಪನದ ನಿಖರ ತೀವ್ರತೆ (Magnitude) ಬಗ್ಗೆ ಇಲಾಖೆಯಿಂದ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

