ಭಾರತೀಯ ಮಹಿಳಾ ಕ್ರಿಕೆಟ್ನ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಮತ್ತೆ ಒಂದಾಗಿದ್ದಾರೆಯೇ? ಎಂಬ ಪ್ರಶ್ನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕಾಡಲಾರಂಭಿಸಿದೆ. ಇತ್ತೀಚೆಗೆ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಅವರು ಪಲಾಶ್ ಮುಚ್ಚಲ್ ಅವರ ಸಹೋದರಿ, ಗಾಯಕಿ ಪಲಕ್ ಮುಚ್ಚಲ್ ಮತ್ತು ಅವರ ಪತಿ ಮಿಥೂನ್ ಅವರನ್ನು ಭೇಟಿಯಾಗಿರುವ ವಿಡಿಯೋ ವೈರಲ್ ಆಗಿದೆ. ಈ ಭೇಟಿಯ ವೇಳೆ ಪಲಕ್ ಅವರು ಸ್ಮೃತಿ ತಂದೆಯ ಪಾದ ಮುಟ್ಟಿ ನಮಸ್ಕರಿಸಿರುವುದು ಅಭಿಮಾನಿಗಳ ಆಶ್ಚರ್ಯಕ್ಕೆ ಕಾರಣವಾಗಿದೆ.
ಹಿಂದೆ ನಡೆದಿದ್ದೇನು?
ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ 2025ರ ನವೆಂಬರ್ 23ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ವಿವಾಹವಾಗಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಮದುವೆ ರದ್ದಾಗಿತ್ತು. ಸ್ಮೃತಿ ಮಂಧಾನ ಅವರು ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ “ಮದುವೆ ರದ್ದಾಗಿದೆ, ನಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸಿ” ಎಂದು ಕೇಳಿಕೊಂಡಿದ್ದರು.
ವಂಚನೆಯ ಆರೋಪ ಕೇಳಿಬಂದಿತ್ತು:
ಈ ಹಿಂದೆ ಮದುವೆ ರದ್ದಾದ ಸಮಯದಲ್ಲಿ ಸ್ಮೃತಿ ಅವರ ಸ್ನೇಹಿತ ವಿಜ್ಞಾನ್ ಮಾನೆ ಎಂಬುವವರು ಪಲಾಶ್ ಮುಚ್ಚಲ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. “ಪಲಾಶ್ ಅವರು ಸ್ಮೃತಿಗೆ ಮೋಸ ಮಾಡಿದ್ದಾರೆ ಮತ್ತು ಮದುವೆಯ ಕಾರ್ಯಕ್ರಮಗಳ ನಡುವೆಯೇ ಅವರು ಮತ್ತೊಬ್ಬ ಮಹಿಳೆಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು” ಎಂದು ಆರೋಪಿಸಿದ್ದರು.
ಆದರೆ, ಈ ಎಲ್ಲಾ ಆರೋಪಗಳನ್ನು ಪಲಾಶ್ ಮುಚ್ಚಲ್ ನಿರಾಕರಿಸಿದ್ದರು. ಇವು ಆಧಾರರಹಿತ ಮತ್ತು ತನ್ನ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನಗಳು ಎಂದು ಹೇಳಿದ್ದ ಪಲಾಶ್, ವಿಜ್ಞಾನ್ ಮಾನೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.
ಮತ್ತೆ ಒಂದಾದರೇ ಕುಟುಂಬಗಳು?
ಈಗ ವೈರಲ್ ಆಗಿರುವ ವಿಡಿಯೋ ನೋಡಿರುವ ನೆಟ್ಟಿಗರು, “ಮಂಧಾನ ಮತ್ತು ಮುಚ್ಚಲ್ ಕುಟುಂಬಗಳು ಹಳೆಯ ಕಹಿ ಘಟನೆಗಳನ್ನು ಮರೆತು ಮತ್ತೆ ಒಂದಾಗಿವೆಯೇ? ಮದುವೆ ಶೀಘ್ರದಲ್ಲೇ ನಡೆಯಲಿದೆಯೇ?” ಎಂದು ಚರ್ಚಿಸುತ್ತಿದ್ದಾರೆ. ಆದರೂ, ಈ ಬಗ್ಗೆ ಉಭಯ ಕುಟುಂಬಗಳಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಕೆಲವು ಬಳಕೆದಾರರು ಈ ವಿಡಿಯೋ ಹಳೆಯದಿರಬಹುದು ಎಂದೂ ಅಭಿಪ್ರಾಯಪಟ್ಟಿದ್ದಾರೆ.

