ದಾವಣಗೆರೆ: ಖಾಲಿ ನಿವೇಶನಗಳ ಮಾಲೀಕರು ಈ ಪ್ರಕಟಣೆ ಹೊರಬಿದ್ದ 15 ದಿನಗಳ ಒಳಗಾಗಿ ತಮ್ಮ ನಿವೇಶನಗಳನ್ನು ಸ್ವತಃ ಸ್ವಚ್ಛಗೊಳಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಮಹಾಂತೇಶ್ ತಿಳಿಸಿದ್ದಾರೆ.
ದಾವಣಗೆರೆ ನಗರದಲ್ಲಿ ಹೊಸ ಬಡಾವಣೆಗಳ ಸಂಖ್ಯೆ ಹೆಚ್ಚುತ್ತಿದ್ದು, ನಿವೇಶನಗಳನ್ನು ಖರೀದಿಸಿ ಕಟ್ಟಡ ನಿರ್ಮಿಸದೆ ಖಾಲಿ ಬಿಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇಂತಹ ಖಾಲಿ ನಿವೇಶನಗಳಲ್ಲಿ ಗಿಡ-ಗಂಟಿಗಳು ಬೆಳೆದು, ಹಾವು ಹಾಗೂ ಚೇಳುಗಳಂತಹ ವಿಷ ಜಂತುಗಳ ಆವಾಸಸ್ಥಾನವಾಗಿ ಮಾರ್ಪಟ್ಟಿವೆ. ಇದರಿಂದಾಗಿ ನೆರೆಹೊರೆಯಲ್ಲಿ ವಾಸಿಸುವ ನಾಗರಿಕರಿಗೆ ತೊಂದರೆಯಾಗುತ್ತಿರುವುದಲ್ಲದೆ, ಮಳೆಗಾಲದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ನಗರದ ನೈರ್ಮಲ್ಯ ಹಾಗೂ ಸೌಂದರ್ಯಕ್ಕೂ ಧಕ್ಕೆಯುಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಖಾಲಿ ನಿವೇಶನಗಳ ಮಾಲೀಕರು ಈ ಪ್ರಕಟಣೆ ಹೊರಬಿದ್ದ 15 ದಿನಗಳ ಒಳಗಾಗಿ ತಮ್ಮ ನಿವೇಶನಗಳನ್ನು ಸ್ವತಃ ಸ್ವಚ್ಛಗೊಳಿಸಬೇಕು ಎಂದು ತಿಳಿಸಿದ್ದಾರೆ.
ನಿಗದಿತ ಅವಧಿಯಲ್ಲಿ ಸ್ವಚ್ಛಗೊಳಿಸದಿದ್ದರೆ, ಮಹಾನಗರ ಪಾಲಿಕೆಯಿಂದಲೇ ನಿವೇಶನವನ್ನು ಸ್ವಚ್ಛಗೊಳಿಸಿ, ಅದಕ್ಕೆ ತಗುಲುವ ವೆಚ್ಚವನ್ನು ನಿವೇಶನ ಮಾಲೀಕರ ಆಸ್ತಿ ತೆರಿಗೆಯ ಬಾಕಿ ಮೊತ್ತದಲ್ಲಿ ಸೇರಿಸಿ ವಸೂಲಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಖಾಲಿ ನಿವೇಶನಗಳ ಅಳತೆ ಹಾಗೂ ಸ್ವಚ್ಛತಾ ಶುಲ್ಕದ ವಿವರ:
20×30 (600 ಚ.ಅಡಿ): ರೂ. 2,500,
30×40 (1200 ಚ.ಅಡಿ) ರೂ. 5,100
30×50 (1500 ಚ.ಅಡಿ): ರೂ. 6,100
40×60 (2400 ಚ.ಅಡಿ) ರೂ. 9,100
50×80(4000 ಚ.ಅಡಿ) ರೂ. 12,150
4000 ಚ.ಅಡಿಗಳಿಗಿಂತ ಮೇಲ್ಪಟ್ಟ ನಿವೇಶನಗಳಿಗೆ ಸಮಾನುಪಾತ(Proportionate) ಆಧಾರದ ಮೇಲೆ ಶುಲ್ಕ ವಿಧಿಸಲಾಗುವುದು.
ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯದ ಹಿತದೃಷ್ಟಿಯಿಂದ ನಿವೇಶನದಾರರು ಪಾಲಿಕೆಯೊಂದಿಗೆ ಸಹಕರಿಸಬೇಕೆಂದು ಮಹಾನಗರ ಪಾಲಿಕೆ ಆಯುಕ್ತ ಮಹಾಂತೇಶ್ ಅವರು ತಿಳಿಸಿದ್ದಾರೆ.
ಮೇವು ಬೀಜ ಕಿರುಪೊಟ್ಟಣ ವಿತರಣೆ ಸದುಪಯೋಗಿಸಿಕೊಳ್ಳಿ: ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ
ದಾವಣಗೆರೆ: ಜಿಲ್ಲೆಯ ಪ್ರತಿ ಪಶುವೈದ್ಯಕೀಯ ಸಂಸ್ಥೆಯಲ್ಲಿ ಉಚಿತ ಮೇವಿನ ಬೀಜದ ಕಿರುಪೊಟ್ಟಣಗಳು ಲಭ್ಯವಿದ್ದು, ಜಾನುವಾರುಗಳನ್ನು ಹೊಂದಿರುವ ಅರ್ಹ ರೈತರು ನಿಗದಿತ ದಾಖಲೆಗಳನ್ನು ಸಲ್ಲಿಸಿ ಈ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಮ್ಮಿಕೊಂಡಿದ್ದ ಮೇವು ಬೀಜ ಕಿರುಪೊಟ್ಟಣಗಳನ್ನು ರೈತರಿಗೆ ವಿತರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದರಿಂದ ಸೃಷ್ಟಿಯಾಗಿರುವ ಬರ ಪರಿಸ್ಥಿತಿಯಲ್ಲಿ ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಜಿಲ್ಲೆಗೆ ಪೂರೈಕೆಯಾಗಿರುವ ಸೊರಗಮ್ ಮೇವಿನ ಜೋಳ ಹಾಗೂ ಆಫ್ರಿಕನ್ ಟಾಲ್ ತಳಿಯ ಮೇವಿನ ಬೀಜದ ಕಿರುಪೊಟ್ಟಣಗಳನ್ನು ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಸರಬರಾಜು ಮಾಡಲಾಗಿದೆ ಎಂದು ತಿಳಿಸಿದರು.
ಜಾನುವಾರುಗಳನ್ನು ಹೊಂದಿರುವ ರೈತರು ತಮ್ಮ ಜಮೀನಿನಲ್ಲಿ ಮೇವನ್ನು ಉತ್ಪಾದಿಸಲು ಸಿದ್ಧರಿರಬೇಕು. ಉಚಿತ ಮೇವಿನ ಬೀಜದ ಕಿರುಪೊಟ್ಟಣಗಳನ್ನು ಪಡೆದು, ಅದನ್ನು ತಮ್ಮ ಸ್ವಂತ ಜಮೀನಿನಲ್ಲೇ ಬೆಳೆದು ಜಾನುವಾರುಗಳಿಗೆ ಉಚಿತವಾಗಿ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಒಟ್ಟು 11,751 ಮೇವಿನ ಬೀಜದ ಕಿರುಪೊಟ್ಟಣಗಳು ಸರಬರಾಜಾಗಿದ್ದು, ಎಲ್ಲಾ ತಾಲೂಕುಗಳಲ್ಲಿ ವಿತರಿಸಲಾಗುತ್ತಿದೆ. ಆದ್ದರಿಂದ ಜಾನುವಾರುಗಳನ್ನು ಹೊಂದಿರುವ ಆಸಕ್ತ ರೈತರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಸಮೀಪದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಿ ಉಚಿತವಾಗಿ ಮೇವಿನ ಬೀಜದ ಕಿರುಪೊಟ್ಟಣಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ.ಮಹೇಶ್, ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್ ಜಿಲ್ಲಾ ಮಟ್ಟದ ಅಧಿಕಾರಿಗಳು ರೈತರು ಹಾಗೂ ಇತರರು ಉಪಸ್ಥಿತರಿದ್ದರು.

