HomeLatest Newsಎರಡೂವರೆ ತಿಂಗಳಲ್ಲಿ ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನಕ್ಕೆ 5000 ಕೋಟಿ ರೂ.: ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ HDK...

ಎರಡೂವರೆ ತಿಂಗಳಲ್ಲಿ ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನಕ್ಕೆ 5000 ಕೋಟಿ ರೂ.: ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ HDK ಘೋಷಣೆ

ಭದ್ರಾವತಿ: ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನಕ್ಕೆ 5000 ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.

ಭದ್ರಾವತಿಯ ಮಿಲ್ಟ್ರಿ ಕ್ಯಾಂಪ್ ವಿಐಎಸ್ಎಲ್ ಹೆಲಿಪ್ಯಾಡ್ ಮೈದಾನದಲ್ಲಿ ಶನಿವಾರ ಆರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಅವರು ಮಾತನಾಡಿ, ಎರಡೂವರೆ ತಿಂಗಳಲ್ಲಿ ಕಾರ್ಖಾನೆಗೆ ಕಾಯಕಲ್ಪ ನೀಡಲಾಗುವುದು. ಭಾರತೀಯ ಉಕ್ಕು ಪ್ರಾಧಿಕಾರ ವಿಐಎಸ್ಎಲ್ ಪುನಶ್ಚೇತನಕ್ಕೆ 5000 ಕೋಟಿ ರೂಪಾಯಿ ಅನುದಾನ ನೀಡಲು ನಿರ್ಧರಿಸಿದೆ. ಕೇಂದ್ರ ಹಣಕಾಸು ಸಚಿವರ ಸಹಿ ಮಾತ್ರ ಬಾಕಿ ಇದೆ. ಪ್ರಧಾನಿ ಮೋದಿ ಕಾರ್ಖಾನೆ ಪುನಶ್ಚೇತನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ತರಳಬಾಳು ಶ್ರೀಗಳು ಭದ್ರಾವತಿಯಲ್ಲಿ ಜನೋಪಯೋಗಿ ಕಾರ್ಯಗಳು ಹಾಗೂ ಕೈಗಾರಿಕೆಯ ಪುನಶ್ಚೇತನಕ್ಕೆ ಮಾರ್ಗದರ್ಶನ ನೀಡುತ್ತಿರುವುದನ್ನು ಪ್ರಶಂಸಿಸಿದರು. ಕಳೆದ ಮೂರು ಬಾರಿ ಭದ್ರಾವತಿಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಮ್ಮ ಮೂಲ ಸಂಸ್ಕೃತಿ ನಿಧಾನವಾಗಿ ನಶಿಸುತ್ತಿರುವುದು ವಿಷಾದಕರ ಸಂಗತಿ. ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಜನರಿಗೆ ಸುಖ, ಶಾಂತಿ ಮತ್ತು ನೆಮ್ಮದಿ ದೊರೆಯಲಿ ಎಂದು ಆಶಿಸಿದರು.

ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಾತನಾಡಿ, ತರಳಬಾಳು ಹುಣ್ಣಿಮೆ ಮಹೋತ್ಸವವು ಪ್ರತಿವರ್ಷ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಪುನಃಶ್ಚೇತನಗೊಳಿಸುವ ಅತ್ಯಂತ ಮಹತ್ವದ ಕಾರ್ಯಕ್ರಮವಾಗಿ ರೂಪುಗೊಳ್ಳುತ್ತಿದೆ. ಮಹೋತ್ಸವವು ಕೇವಲ ಧಾರ್ಮಿಕ ಆಚರಣೆಯಾಗದೆ, ಬೌದ್ಧಿಕ ಮತ್ತು ಸಾಂಸ್ಕೃತಿಕ ಚಿಂತನೆಗೆ ವೇದಿಕೆಯಾಗಿದ್ದು, ದೇಶಸೇವೆ ಹಾಗೂ ಈಶಸೇವೆಯನ್ನು ಒಟ್ಟಾಗಿ ನಡೆಸುವ ಸಂದೇಶವನ್ನು ಸಾರುತ್ತಿದೆ ಎಂದು ತಿಳಿಸಿದರು.

ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಆಶೀರ್ವಚನ ನೀಡಿ, ಸಿರಿಗೆರೆ ಮಠವು ಧಾರ್ಮಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ನಾಡಿಗೆ ತನ್ನದೇ ಆದ ಮಹತ್ವದ ಕೊಡುಗೆ ನೀಡಿರುವುದನ್ನು ಸ್ಮರಿಸಿದರು. ಹುಣ್ಣಿಮೆ ಮಹೋತ್ಸವ ಹಾಗೂ ಶ್ರೀಮಠದಿಂದ ಒಟ್ಟು 5 ಕೋಟಿ ರೂ. ನೆರವು ನೀಡುವ ಭರವಸೆ ನೀಡಿದ ಶ್ರೀಗಳು, ಫೆಬ್ರವರಿ 1ರ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಪುನರ್‌ಸ್ಥಾಪನೆಗೆ ಕುಮಾರಸ್ವಾಮಿ ಅವರು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದರಾದ ಬಿ.ವೈ.ರಾಘವೇಂದ್ರ, ಗೋವಿಂದ ಕಾರಜೋಳ, ಶಾಸಕರಾದ ಬಿ.ಕೆ. ಸಂಗಮೇಶ್ವರ್, ಶಾರದಾ ಪೂರ್ಯಾನಾಯ್ಕ್, ಎಸ್.ಎಲ್. ಭೋಜೇಗೌಡ, ಸಮಿತಿ ಮುಖ್ಯಸ್ಥ ಎಚ್.ಆರ್. ಬಸವರಾಜಪ್ಪ, ಜಾನಪದ ವಿದ್ವಾಂಸರಾದ ಪ್ರೊ.ಶಂಭು ವಿ. ಬಳಿಗಾರ್, ಶುಭಾ ಮರವಂತೆ, ನಟ ಅರುಣ್‌ಸಾಗರ್, ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್ ಇದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular