ಬೆಂಗಳೂರು: ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ ಸೇರಿದಂತೆ ವಸತಿ ಶಿಕ್ಷಣ ಸಂಸ್ಥೆಗಳ ಆರನೇ ತರಗತಿ ಪ್ರವೇಶಾತಿಗೆ ಅರ್ಜಿ ಸಲ್ಲಿಸುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಹೊಸ ಜಾತಿ ಪ್ರಮಾಣ ಪತ್ರ ಪಡೆಯುವ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಒಳ ಮೀಸಲಾತಿ ವರ್ಗೀಕರಣದ ಆದೇಶದ ಬೆನ್ನಲ್ಲೇ ಹೊಸ ವರ್ಗೀಕರಣದ ಅನ್ವಯ ಹೊಸ ಜಾತಿ ಪ್ರಮಾಣ ಪತ್ರ ಪಡೆಯಬೇಕೆಂದು ಸೂಚಿಸಲಾಗಿದೆ. ಜನವರಿ 20ರಂದು ಈ ಸೂಚನೆ ಪ್ರಕಟವಾಗಿದ್ದು, ಕೇವಲ ಐದು ದಿನ ಕಾಲಾವಕಾಶ ನೀಡಲಾಗಿದೆ. ಐದು ದಿನದಲ್ಲಿ ಜನವರಿ 24, 25 ರಂದು ಸರ್ಕಾರಿ ಕಚೇರಿಗಳಿಗೆ ರಜೆ ಇದೆ. ಕಾಲಾವಕಾಶ ಕಡಿಮೆ ಇರುವುದರಿಂದ ಎಲ್ಲರಿಗೂ ಜಾತಿ ಪ್ರಮಾಣ ಪತ್ರ ಸಿಗುವುದು ಕಷ್ಟ ಸಾಧ್ಯ. ವಸತಿ ಶಾಲೆ ಆಕಾಂಕ್ಷಿಗಳಿಗೆ ಸೌಲಭ್ಯದಿಂದ ವಂಚಿತರಾಗುವ ಭಯ ಉಂಟಾಗಿದ್ದು, ಅವಧಿಯನ್ನು ವಿಸ್ತರಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ವಸತಿ ಶಿಕ್ಷಣ ಸಂಸ್ಥೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಸೂಚನೆ ನೀಡಿದೆ. ವಸತಿ ಶಾಲೆಗಳ ಪ್ರವೇಶಕ್ಕೆ ದಾಖಲಾತಿ ಸಲ್ಲಿಸಲು ಜನವರಿ 25 ಕೊನೆಯ ದಿನವಾಗಿದೆ. ಜನವರಿ 20ರಂದು ಹೊಸ ಜಾತಿ ಪ್ರಮಾಣ ಪತ್ರ ಸಲ್ಲಿಸಲು ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ನೀಡಿದೆ. ನಾಲ್ಕೈದು ದಿನದಲ್ಲಿ ಹೊಸ ಪ್ರಮಾಣ ಪತ್ರ ಪಡೆಯುವುದು ಕಷ್ಟ ಸಾಧ್ಯವಾಗಿದ್ದು, ದಿನಾಂಕ ವಿಸ್ತರಿಸಬೇಕೆಂಬ ಒತ್ತಾಯಿಸಲಾಗಿದೆ.

