ಬೆಂಗಳೂರು: ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪನವರಿಗೆ ಸರ್ಕಾರಿ ಗೌರವದ ಅವ್ಯವಸ್ಥೆ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ, ಸರಿಯಾಗಿ ವ್ಯವಸ್ಥೆ ಮಾಡಲಿಲ್ಲ. ಶಾಮನೂರು ಶಿವಶಂಕರಪ್ಪ ಅಜಾತಶತ್ರು, ಪಕ್ಷಕ್ಕೆ ದೊಡ್ಡ ಆಸ್ತಿಯಾಗಿದ್ದರು. ಅವರ ಅಂತ್ಯ ಸಂಸ್ಕಾರದ ವೇಳೆ ಸರ್ಕಾರಿ ಗೌರವದ ಬಗ್ಗೆ ಸರಿಯಾಗಿ ವ್ಯವಸ್ಥೆಯಾಗಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿನ್ನೆ ಸದನದಲ್ಲಿ ಶಾಮನೂರು ಅವರ ಬಗ್ಗೆ ಮಾತನಾಡಲು ಆಗಿಲ್ಲ. ಇಂದು ಪ್ರಯತ್ನ ಮಾಡುತ್ತೇನೆ. ಶಿವಶಂಕರಪ್ಪ ಅವರ ನಿಷ್ಠೆ, ಪ್ರಾಮಾಣಿಕತೆ ಬಗ್ಗೆ ಹೇಳಲು ಆಗುವುದಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಬೇರೆ ಬೇರೆ ಪಕ್ಷದವರು ಅಂತ್ಯಕ್ರಿಯೆಗೆ ಬಂದಿದ್ದರು. ಆದರೆ ನಿನ್ನೆ ಸ್ವಲ್ಪ ವ್ಯವಸ್ಥೆ ಸರಿಯಾಗಿ ಆಗಿರಲಿಲ್ಲ ಎಂದರು.
ನಾನು ದಾವಣಗೆರೆ ಜಿಲ್ಲಾಧಿಕಾರಿ ಮತ್ತು ಎಸ್.ಪಿ. ಅವರೊಂದಿಗೆ ಮಾತನಾಡುತ್ತೇನೆ. ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿ ಇಬ್ಬರಿಗೂ ನೋಟಿಸ್ ನೀಡಲು ಹೇಳುತ್ತೇನೆ. ನನ್ನ ಮನಸ್ಸಿಗೆ ಸಮಾಧಾನವಾಗಲಿಲ್ಲ. ಒತ್ತಡ ಇತ್ತು, ಜಾಗ ಚಿಕ್ಕದಾಗಿತ್ತು, ಅದು ಬೇರೆ ವಿಚಾರ. ಆದರೆ ವ್ಯವಸ್ಥೆ ಸರಿಯಾಗಿ ಮಾಡಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.

